ಮೋದಿ ಅಲೆಯಲ್ಲ, ಗ್ಯಾರಂಟಿ ಅಲೆ: ಸಿದ್ದರಾಮಯ್ಯ ಗುಡುಗು

mysore
Published on

ಮೈಸೂರು: ಎಲ್ಲಿಯೂ ನರೇಂದ್ರ ಮೋದಿ ಅಲೆ ಇಲ್ಲ, ಬರೀ ಗ್ಯಾರಂಟಿ ಯೋಜನೆಗಳ ಅಲೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.


ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಎನ್.ಆರ್.ಮೊಹಲ್ಲಾದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ‘ಪ್ರಜಾಧ್ವನಿ-2’ ಜನ ಸಮಾವೇಶದಲ್ಲಿ ಮಾತನಾಡಿದರು. ಮೋದಿ ಬರೀ ಭಾಷಣ ಹೊಡೆಯಲು ರಾಜ್ಯಕ್ಕೆ ಬರುತ್ತಾರೆ. ಜನರಿಗೆ ಏನೂ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.


ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸ್ವಾತಂತ್ರೃ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಬಂದಿಲ್ಲ. ಅಪರೂಪಕ್ಕಾದರೂ ಸತ್ಯ ಹೇಳಿ ಎಂದು ಕುಟುಕಿದರು.


ಮೋದಿಯವರೇ ಚುನಾವಣೆ ಸಮಯದಲ್ಲಿ ಬಿಟ್ಟರೆ ಬೇರೆ ಸಂದರ್ಭದಲ್ಲಿ ಕರ್ನಾಟಕ ನೆನಪು ಆಗಲಿಲ್ಲವೇ ನಿಮಗೆ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.
ರಾಜ್ಯಕ್ಕೆ ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಆಗಮಿಸಲಿಲ್ಲ. ಈಗ ಚುನಾವಣೆ ಬಂತು ಓಡಿ ಬಂದಿದ್ದೀರಿ. ಸುಳ್ಳು ಹೇಳಿ ಹೋಗಿದ್ದೀರಿ. ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದಿದ್ದೀರಿ? ಇಷ್ಟೊಂದು ಸುಳ್ಳು ಹೇಳೋಕೇ ಬಂದರಾ ಇಲ್ಲಿಗೆ? ಇದು ಪ್ರಧಾನಮಂತ್ರಿ ಸ್ಥಾನಕ್ಕೆ ತೋರಿದ ಅಗೌರವ ಎಂದು ಹರಿಹಾಯ್ದರು.


ನಮ್ಮ ರಾಜ್ಯದ ಜನ ಬರಗಾಲದಲ್ಲಿ ಬೆಂದಿದ್ದಾರೆ, ನಮ್ಮ ರೈತರು ಕಷ್ಟದಲ್ಲಿದ್ದಾರೆ. ನಮ್ಮ ಪಾಲಿನ ಹಣ ಕೊಡಿ ಎಂದು ಕೇಳಿಕೊಂಡಿದ್ದೆವು. ನಾನೇ ಬಂದು ನಿಮ್ಮನ್ನು ಮತ್ತು ಗೃಹ ಸಚಿವ ಅಮಿತ್ ಷಾ ಇಬ್ಬರನ್ನೂ ಭೇಟಿ ಮಾಡಿ ಮನವಿ ನೀಡಿದ್ದನ್ನೆಲ್ಲ. ಈವರೆಗೂ ಒಂದೇ ಒಂದು ರೂಪಾಯಿಯನ್ನೂ ರಾಜ್ಯಕ್ಕೆ ನೀಡಿಲ್ಲ ಏಕೆ? ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದು ಮತ ಕೇಳ್ತಾ ಇದೀರಿ ಎಂದು ಗುಡುಗಿದರು.


ಚುನಾವಣಾ ಬಾಂಡ್‌ಗಳ ಮೂಲಕ ಕಾರ್ಪೋರೇಟ್ ಕಂಪನಿಗಳಿಂದ ಸಂಗ್ರಹಿಸಿದ 7,600 ಕೋಟಿ ರೂಪಾಯಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಅಪರಾಧ ಅಲ್ವೇ? ಇದಕ್ಕೆ ಹೊಣೆ ಹೊರುವವರು ಯಾರು? ಉತ್ತರ ಕೊಡಿ ಮೋದಿಯವರೇ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.


10 ವರ್ಷ ಪ್ರಧಾನಿ ಆಗಿ ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಬಡವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಮಾಡಿದ್ದರೆ ತೋರಿಸಿ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಅಂದ್ರಲ್ಲಾ 15 ರೂಪಾಯಿ ಸಹ ಹಾಕಿದ್ರಾ ಎಂದೂ ಪ್ರಶ್ನಿಸಿದರು.


ಅಚ್ಛೇ ದಿನ್ ಆಯೇಗಾ ಅಂದ್ರಲ್ಲ ಮೋದಿಜಿ, ಎಲ್ಲಿದೆ ತೋರಿಸಿ ಅಚ್ಛೇ ದಿನ್? ಡೀಸೆಲ್, ಪೆಟ್ರೋಲ್, ಗ್ಯಾಸ್, ಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗಿದೆಯೇ? ನಿರುದ್ಯೋಗ ಸಮಸ್ಯೆ ಬಗೆಹರಿಸಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೀರಾ? ಎಂದು ಪ್ರಶ್ನೆಗಳ ಮಳೆ ಸುರಿಸಿದ ಸಿಎಂ, ಇಂತಹ ವಿಷಯಗಳು ಕುರಿತು ಮೋದಿ ಮಾತನಾಡಲ್ಲ ಎಂದು ಕಾಲೆಳೆದರು.


‘ಗ್ಯಾರಂಟಿಯಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಮಾತಿನ ಅರ್ಥವೇನು? ಇದು ಮಹಿಳೆಯರ ಸ್ವಾಭಿಮಾನಕ್ಕೆ, ಗೌರವಕ್ಕೆ ಧಕ್ಕೆ ತರುವ ಕೆಲಸ. 2 ಸಲ ಸಿಎಂ ಆಗಿರುವ ನಿಮಗೆ ಈ ಮಾತು ಶೋಭೆ ತರುತ್ತದೆಯೇ? ಎಲ್ಲ ಮಹಿಳೆಯರು ಸೇರಿ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯಿಂದ ಮಹಿಳೆಯರಿಗೆ ನೋವಾಗಿದೆ. ಮಹಿಳಾ ಕುಲಕ್ಕೆ ಮಾಡಿದ ಅವಮಾನ ಇದು. ಅವರಿಗೆ ಬಡ ಮಹಿಳೆಯರಿಗೆ ಕಷ್ಟ ಗೊತ್ತಿಲ್ಲ. ಇವರಿಗೆ ಮಹಿಳೆಯರು ಧಿಕ್ಕಾರ ಕೂಗಬೇಕು, ಚುನಾವಣೆಯಲ್ಲೂ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕರಾದ ಭಾರತೀಶಂಕರ್, ಎಂ.ಕೆ.ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಮೇಯರ್ ಆರೀಫ್ ಹುಸೇನ್, ಪಕ್ಷದ ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರಿದ್ದರು

ಮೈಸೂರಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಾಕ್ಷಿ ತೋರಿಸಿ

3 ವರ್ಷ 10 ತಿಂಗಳು ಬಿಜೆಪಿ ಸರ್ಕಾರ ಅವಧಿಯಲ್ಲಿ ಮೈಸೂರಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಾಕ್ಷಿ ತೋರಿಸಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ನಾವು ಜಯದೇವ ಆಸ್ಪತ್ರೆ, ಮಹಾರಾಣಿ ಕಾಲೇಜು ಕಟ್ಟಡ, ಹಾಸ್ಟೆಲ್, ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಟ್ರಾಮಾ ಸೆಂಟರ್ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದವು. ನೀವು ಏನು ಮಾಡಿದ್ದೀರಿ ತೋರಿಸಿ. ಇದನ್ನು ಮೋದಿ ಏಕೆ ಕೇಳಲಿಲ್ಲ ಎಂದು ಮೊದಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net