

ರಾಜ್ಯ ಸರ್ಕಾರ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿರುವುದರಿಂದ ಹೊಸದಾಗಿ ಖಾಸಗಿ ಶಾಲೆ ಪ್ರಾರಂಭಿಸಲು ಯಾರೂ ಮುಂದೆ ಬರುತ್ತಿಲ್ಲ!
2020-21ನೇ ಸಾಲಿಗೆ ಹೊಸ ಶಾಲೆ ಆರಂಭಿಸಲು ಅತಿ ಕಡಿಮೆ ಅರ್ಜಿ ಸಲ್ಲಿಕೆಯಾಗಿರುವುದೇ ಇದಕ್ಕೆ ಸಾಕ್ಷಿ. 2020-21ರಲ್ಲಿ ಎಲ್ಲ ಹಂತದಲ್ಲಿ 486 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಹೊಸದಾಗಿ ಪ್ರಾಥಮಿಕ ಶಾಲೆ ಆರಂಭಕ್ಕೆ 220 ಅರ್ಜಿ ಬಂದಿವೆ. ಪೂರ್ವ ಪ್ರಾಥಮಿಕಕ್ಕೆ 10, ಪ್ರಾಥಮಿಕದಿಂದ ಪ್ರೌಢಕ್ಕೆ 6, ಪ್ರೌಢಶಾಲೆಗೆ 110 ಮತ್ತು 6ರಿಂದ 10ನೇ ತರಗತಿಯ ಉನ್ನತೀಕರಣಕ್ಕೆ 140 ಸೇರಿ 486 ಅರ್ಜಿ ಸಲ್ಲಿಕೆಯಾಗಿವೆ. ಇದ ರಿಂದ ನೋಂದಣಿ ಹಾಗೂ ಸಂಸ್ಕರಣಾ ಶುಲ್ಕವಾಗಿ ಶಿಕ್ಷಣ ಇಲಾಖೆಗೆ 1.28 ಕೋಟಿ ರೂ. ಆರ್ಥಿಕ ಆದಾಯ ಬಂದಿದೆ.
ಇದರ ಪರಿಣಾಮ ಖಾಸಗಿ ಶಾಲೆ ತೆರೆದು ಲಾಭಗಳಿಸುವುದು ಕಷ್ಟವೆಂದು ಹಲವರು ಬಂಡವಾಳ ಹೂಡಿಕೆ ಮಾಡಲು ಹಿಂದೆ ಸರಿದಿದ್ದಾರೆ. ಆದರೆ, 2020ನೇ ಸಾಲಿನಲ್ಲಿ ಶಿಕ್ಷಣ ಕೇತ್ರಕ್ಕೆ ವಿದೇಶಿ ಬಂಡವಾಳ ಹೂಡಿಕೆಗೆ(ಎಫ್ಡಿಐ) ಅವಕಾಶ ನೀಡಿರುವು ದರಿಂದ ಮುಂದೆ ಅರ್ಜಿ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಹೊಸ ಶಾಲೆ ಆರಂಭಕ್ಕೆ ಮಾನ್ಯತೆ ಸಿಗದಿದ್ದರೂ ಕಟ್ಟಿದ ನೋಂದಣಿ ಮತ್ತು ಸಂಸ್ಕರಣ ಶುಲ್ಕ ಹಿಂತಿರುಗಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಹೊಸದಾಗಿ ಶಾಶ್ವತ ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸುತ್ತದೆ. ಈ ರೀತಿ ಅರ್ಜಿ ಸಲ್ಲಿಸುವಾಗ 2,500 ರೂ.ನಿಂದ ಆರಂಭವಾಗುವ ಶುಲ್ಕ 1.65 ಲಕ್ಷ ರೂ.ವರೆಗೂ ಇದೆ. ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು.
ಕರ್ನಾಟಕ ಶಿಕ್ಷಣ ಸಂಸ್ಥೆ(ವರ್ಗೀಕರಣ ಮತ್ತು ನಿಯಂತ್ರಣ) 2018 ನಿಯಮ-3ರಲ್ಲಿ ಆಡಳಿತ ಮಂಡಳಿ ನೋಂದಣಿಗಾಗಿ ಸಲ್ಲಿಸಿದ ನೋಂದಣಿ ಹಾಗೂ ಸಂಸ್ಕರಣ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಎಲ್ಲ ದಾಖಲೆಗಳನ್ನು ಸಂಗ್ರಹ ಮಾಡಿಕೊಂಡೇ ಅರ್ಜಿ ಸಲ್ಲಿಸಬೇಕೆಂದು ಹೇಳಿದೆ. ಆದರೆ, ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.50 ಅರ್ಜಿಗಳಿಗೆ ಮಾನ್ಯತೆ ದೊರೆಯುವುದಿಲ್ಲ. ಪಾವತಿಸಿದ ಶುಲ್ಕ ಶಿಕ್ಷಣ ಇಲಾಖೆ ಬಳಿಯಲ್ಲೇ ಉಳಿದುಕೊಳ್ಳುತ್ತದೆ. ಅರ್ಜಿ ಸಲ್ಲಿಸಿದವರಿಗೆ ಇದು ಆರ್ಥಿಕ ನಷ್ಟವಾಗಿದೆ.
ತಿದ್ದುಪಡಿ: ಅರ್ಜಿ ತಿರಸ್ಕಾರವಾದವರಿಗೆ ನೋಂದಣಿ ಮತ್ತು ಸಂಸ್ಕರಣ ಶುಲ್ಕ ಮರುಪಾವತಿಸಬೇಕಾದಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆ(ವರ್ಗೀಕರಣ ಮತ್ತು ನಿಯಂತ್ರಣ) 2018 ನಿಯಮಕ್ಕೆ ತಿದ್ದುಪಡಿ ತರಬೇಕಿದೆ. ಅರ್ಜಿ ಪರಿಶೀಲನೆ, ನಂತರ ಸ್ಥಳ ಪರಿಶೀಲನೆಗೆ ಶಿಕ್ಷಣ ಅಧಿಕಾರಿಗಳು ತೆರಳಬೇಕು. ಹಾಗಾಗಿ ಇಲಾಖೆಗೂ ಸಣ್ಣಪುಟ್ಟ ವೆಚ್ಚ ಇರುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ನೋಂದಣಿ ಮತ್ತು ಸಂಸ್ಕರಣ ಶುಲ್ಕವನ್ನು ಪೂರ್ತಿ ವಾಪಸ್ ನೀಡುವ ಬದಲು ಪ್ರಕ್ರಿಯೆ ಶುಲ್ಕವಾಗಿ ಸ್ವಲ್ಪ ಹಣ ಕಡಿತ ಮಾಡಿ ಉಳಿದದ್ದನ್ನು ನೀಡುವ ಬಗ್ಗೆ ಆಲೋಚಿಸಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ ಎಂದು ತಿಳಿದು ಬಂದಿದೆ.
ಈ ವರ್ಷ ಆಗೋಲ್ಲ: ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಈಗಾಗಲೇ ಅರ್ಜಿ ಆಹ್ವಾನಿಸಿ ರುವುದರಿಂದ ನಿಯಮಗಳ ಪ್ರಕಾರ ನೋಂದಣಿ ಮತ್ತು ಸಂಸ್ಕರಣಾ ಶುಲ್ಕ ವಾಪಸ್ ಸಿಗುವುದಿಲ್ಲ. ಆದರೆ, ಸರ್ಕಾರದ ಒಪ್ಪಿಗೆ ಸಿಕ್ಕರೆ ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಅಂಕಿ-ಅಂಶ
2019-20ರಲ್ಲಿ 467 ಮತ್ತು 2017-18ರಲ್ಲಿ 2,292 ಅರ್ಜಿ ಬಂದಿದ್ದವು. ಆ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಮತ್ತು ಉತ್ತರ ಎರಡೂ ಸೇರಿ 450ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಈ ವರ್ಷ ಇಡೀ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಕೇವಲ 220 ಅರ್ಜಿ ಸಲ್ಲಿಕೆ ಆಗಿರುವುದು ಆಶ್ಚರ್ಯ ಮೂಡಿಸಿದೆ. 2018-19ರಲ್ಲಿ 2,429 ಅರ್ಜಿ ಬಂದಿದ್ದವು. ರಾಜ್ಯದಲ್ಲಿ ಹಾಲಿ 19,645 ಖಾಸಗಿ ಶಾಲೆಗಳಿದ್ದು, 45 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವುದು ಹಾಗೂ ಗುಣಮಟ್ಟ ಶಿಕ್ಷಣ ಸಿಗುತ್ತಿ ರುವುದರಿಂದ ಹೊಸದಾಗಿ ಖಾಸಗಿ ಶಾಲೆ ತೆರೆಯಲು ಸಂಘ-ಸಂಸ್ಥೆಗಳು ಮುಂದೆ ಬಂದಿಲ್ಲ ಎನಿಸುತ್ತದೆ. | ಡಾ.ಕೆ.ಜಿ.ಜಗದೀಶ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಜಿ ಸಲ್ಲಿಸಿದಾಗ ಕಾಟಾಚಾರಕ್ಕೆ ಪರಿಶೀಲನೆ ಮಾಡಿ ಅರ್ಜಿ ರದ್ದು ಮಾಡುತ್ತಾರೆ. ಇದರಿಂದ ಶಾಲೆ ತೆರೆಯಲು ಹೋಗುವವರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಇದನ್ನು ಸರಿಪಡಿಸಿ ಶುಲ್ಕ ಮರುಪಾವತಿಸಬೇಕು. | ಡಿ.ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಒಕ್ಕೂಟ
| ದೇವರಾಜ್ ಎಲ್. ಬೆಂಗಳೂರು