ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಡಳಿತದ ನಿರ್ಬಂಧ ಸರಿಯಲ್ಲ: ಕಾಳಿ ಮಠದ ಸ್ವಾಮೀಜಿ

Kaliswamiji
Published on

ಚಿಕ್ಕಮಗಳೂರು: ಶ್ರೀರಾಮಸೇನೆ ನ.26 ರಂದು ಆಯೋಜಿಸಿರುವ ದತ್ತಮಾಲಾ ಅಭಿಯಾನಕ್ಕೆ ಕರೊನಾ ಹೆಸರಲ್ಲಿ ಜಿಲ್ಲಾಡಳಿತ ನಿರ್ಬಂಧ ವಿಧಿಸುತ್ತಿರುವುದು ಸಮಂಜಸವಲ್ಲ ಎಂದು ಕಾಳಿಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಾರಿ ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯಕ್ಕೆ ಕರೆ ನೀಡಲಾಗಿದೆ. ಯಾಗ ನಡೆಸಲು ಸಿದ್ಧತೆ ನಡೆಸಲಾಗಿದೆ. ಕರೊನಾ ಕಾರಣಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಕ್ಕೆ ಬದ್ಧರಾಗಿ ಈ ಬಾರಿ ಮೆರವಣಿಗೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ವೈಯಕ್ತಿಕ ಅಂತರ ಕಾಪಾಡಬೇಕಿದ್ದಲ್ಲಿ ಅದನ್ನೂ ಪಾಲಿಸುತ್ತೇವೆ. ಹೀಗಿದ್ದ ಮೇಲೆ ಉಳಿದ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಹಿಂದುಗಳ ಭಾವನೆಗೆ ಧಕ್ಕೆ

ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯ ಕಾಯುತ್ತಿದ್ದರೂ ಜಿಲ್ಲಾಡಳಿತ ಸೀಮಿತ ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಿ ಎನ್ನುತ್ತಿದೆ. ಇದರಿಂದ ಇಡೀ ರಾಜ್ಯದ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ. ಜಿಲ್ಲಾಡಳಿತ ಇಂತಹ ನಿರ್ಬಂಧವನ್ನು ನಿರಂತರವಾಗಿ ಹೇರುತ್ತಲೇ ಬಂದಿದೆ. ಕಳೆದ ವರ್ಷ ದತ್ತ ವಿಗ್ರಹವನ್ನು ಬೀದಿಯಲ್ಲಿ ಇರಿಸುವಂತಹ ಸ್ಥಿತಿ ನಿರ್ಮಾಣ ಮಾಡಲಾಯಿತು. ಈಗ ಅದನ್ನು ನಮ್ಮ ಮಠದಲ್ಲಿಟ್ಟು ತ್ರಿಕಾಲ ಪೂಜೆ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.

ಉಪ ಚುನಾವಣೆಗಳಲ್ಲಿ ಸರ್ಕಾರವೇ ಪ್ರಚಾರಕ್ಕಿಳಿದಾಗ ಯಾವ ಅಂತರ ಕಾಪಾಡಲಾಯಿತು? ಹಿಂದುಗಳ ಕಾರ್ಯಕ್ರಮಕ್ಕೆ ಮಾತ್ರ ಈ ನಿರ್ಬಂಧ ಏಕೆ ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರ ಕೂಡಲೇ ಗಮನ ಹರಿಸಬೇಕು. ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಸಿರು ಪಟಾಕಿ ಎಲ್ಲಿ ಸಿಗುತ್ತದೆ ?

ದೀಪಾವಳಿಗೆ ಹಸಿರು ಪಟಾಕಿಗಳನ್ನಷ್ಟೇ ಬಳಸಬೇಕು ಎಂದು ಹೇಳಿರುವ ಸರ್ಕಾರ, ಅವೆಲ್ಲಿ ಸಿಗುತ್ತವೆ, ಯಾವುದು ಹಸಿರು ಪಟಾಕಿ ಎನ್ನುವುದನ್ನು ತಿಳಿಸಿಲ್ಲ. ಮಂಗಳವಾರ ಚುನಾವಣೆ ಫಲಿತಾಂಶ ಬಂದಾಗ ಸಾಕಷ್ಟು ಪಟಾಕಿ ಸಿಡಿಸಲಾಗಿದೆ. ಅವರನ್ನು ಯಾರೂ ಪ್ರಶ್ನಿಸಲಿಲ್ಲವೇಕೆ ಎಂದು ಕೇಳಿದರು.

ಈಗಾಗಲೇ ಬಡವರು ಪಟಾಕಿಗಾಗಿ ಚೀಟಿ ಹಾಕಿದ್ದಾರೆ. ಪಟಾಕಿ ವಹಿವಾಟು ನಡೆಸುವವರೆಲ್ಲ ಸಣ್ಣಪುಟ್ಟ ವ್ಯಾಪಾರಿಗಳೆ. ಅವರೆಲ್ಲ ಬಂಡವಾಳ ಹೂಡಿ ಪಟಾಕಿಗಳನ್ನು ಖರೀದಿಸಿ ತಂದಿದ್ದಾರೆ. ಅವರ ನಷ್ಟ ಭರಿಸುವುದು ಯಾರು ಎಂದು ಪ್ರಶ್ನಿಸಿದರು.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ 6 ಲಕ್ಷ ದೀಪಗಳನ್ನು ಹಚ್ಚುತ್ತಿದ್ದಾರೆ. ಇಲ್ಲಿನ ಸರ್ಕಾರ ಏನು ಮಾಡಲು ಹೊರಟಿದೆ? ಹಿಂದುಗಳ ಹಬ್ಬ ಅಥವಾ ಚಿಕ್ಕಮಗಳೂರಿನ ದತ್ತಪೀಠ ಅಭಿಯಾನಕ್ಕೆ ಧಕ್ಕೆ ತರಬಾರದು. ರಾಜ್ಯದ ಬಿಜೆಪಿ ಸರ್ಕಾರಕ್ಕೆ ದತ್ತಪೀಠದ ಸಮಸ್ಯೆ ಇತ್ಯರ್ಥಕ್ಕೆ ಅವಕಾಶವಿದ್ದು ಅದನ್ನು ಯಾವಾಗ ಬಗೆಹರಿಸುತ್ತದೆ ಎಂದು ಸರ್ಕಾರವನ್ನು ಪ್ರಶ್ನಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net