ಸಿಎಂ ಲಾಬಿಗೆ ದೆಹಲಿಗೆ ಹೋಗುತ್ತಿಲ್ಲ

chaluvarayaswamy
Published on

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಸಿಎಂ ಲಾಬಿಗೆ ದೆಹಲಿಗೆ ಹೋಗುತ್ತಿದ್ದಾರೆ ಎನ್ನುವುದು ಮಾಧ್ಯಮ ಸೃಷ್ಟಿ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಅವರು ಎಲ್ಲಿಯೂ ಸಿಎಂ ಸ್ಥಾನಕ್ಕಾಗಿ ಹೋಗಿದ್ದೆ ಎಂದು ಹೇಳಿಲ್ಲ. ಮೊನ್ನೆ ನಾನು ದೆಹಲಿಗೆ ತೆರಳಿದ್ದೆ. ಅಂದ ಮಾತ್ರಕ್ಕೆ ಸಿಎಂ ಲಾಬಿ ಮಾಡ್ಲಾ ? ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ, ಪೈಪೋಟಿಯೂ ಇಲ್ಲ. ರಾಜೀನಾಮೆಗೆ ಹೈಕಮಾಂಡ್ ಕೂಡ ಹೇಳಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಹೇಳಿಲ್ಲ. ಸಿಎಂ ರಾಜೀನಾಮೆ ಇಲ್ಲ. ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಸಿಎಂ ಬದಲಾವಣೆ ಸೇರಿ ಸಿಎಂ ರೇಸ್ ಎಲ್ಲವೂ ಊಹಾಪೋಹ. ಬಿಜೆಪಿಯವರು ರಾಜ್ಯದಲ್ಲಿ 113 ಸೀಟ್ ದಾಟ್ಟಿಲ್ಲ. ಬಿಜೆಪಿ ಜೆಡಿಎಸ್‌ನವರಿಗೆ ಅಧಿಕಾರ ಸಿಕ್ಕರೂ ಪೂರ್ಣಾಡಳಿತ ನೀಡಿಲ್ಲ. ಅಧಿಕಾರ ಇಲ್ಲದಿದ್ದಾಗ ಅಧಿಕ್ಕಾರಕ್ಕಾಗಿ ಇವರು ಬಡಿದಾಡುತ್ತಾರೆ ಎಂದು ಕುಟುಕಿದರು.
136 ಸೀಟನ ಸುಭದ್ರ ಸರ್ಕಾರ ನಮ್ಮದು. ಇಲ್ಲ ಸಲ್ಲದ ಆರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿಯಾಗಿದ್ದು ಏಕೆ? ಎಂಬುದನ್ನು ಅವರೇ ಹೇಳಿದ್ದಾರೆ. ಗೊಂದಲ ಸೃಷ್ಟಿಸುವುದು ಬೇಡ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಪಡೆದಿದ್ದಾರೆ. ಚರ್ಚೆ ನಂತರ ಜಾರಿ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ಯಾವುದೇ ಆತುರ ಮಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net