

ಗುಂಡ್ಲುಪೇಟೆ: ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದ್ದು ಉನ್ನತ ವಿದ್ಯಾಭ್ಯಾಸ ಮಾಡಿದ ಯುವಕರು ಉದ್ಯೋಗಕ್ಕಾಗಿ ಶಾಸಕರ ಶಿಫಾರಸ್ಸು ಪತ್ರಗಳಿಗೆ ಕಾಯುವಂತಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಸಂಕಲ್ಪ ಶಿಕ್ಷಕರ ವೇದಿಕೆ, ಸಂಗಮ ಪ್ರತಿಷ್ಠಾನ, ಸಾಧನಾ ಅಕಾಡೆಮಿ ಹಾಗೂ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರ್ಹತೆಗೆ ತಕ್ಕಂತೆ ಉದ್ಯೋಗ ದೊರಕುವುದು ದೊಡ್ಡ ಸವಾಲಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ಪರೀಕ್ಷೆಗಳನ್ನು ಎದುರಿಸಲು ನಾನಾ ಭಾಷೆಗಳ ಜ್ಞಾನ ಪಡೆದುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದರೆ ಮಾತ್ರ ಉನ್ನತ ಉದ್ಯೋಗ ಪಡೆದುಕೊಳ್ಳಬಹುದು. ಪಟ್ಟಣದ ಯುವ ಶಿಕ್ಷಕರು ಸಂಕಲ್ಪ ಶಿಕ್ಷಕರ ವೇದಿಕೆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ 450 ವಿದ್ಯಾರ್ಥಿಗಳಿಗೆ ನಿಸ್ವಾರ್ಥವಾಗಿ ತರಬೇತಿ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಕಲ್ಪ ಶಿಕ್ಷಕರ ವೇದಿಕೆಯ ನಂದೀಶ್, ಗುರುಪ್ರಸಾದ್, ನಾಗರಾಜ ಶರ್ಮನ್, ಪ್ರಭುಸ್ವಾಮಿ, ಮಹೇಶ್, ಮಹದೇವಮೂರ್ತಿ, ಬೆಂಗಳೂರು ಐಎಎಸ್ ಅಕಾಡೆಮಿಯ ಚೇತನ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಸ್.ಎಸ್.ನಂಜುಂಡ ಪ್ರಸಾದ್, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್ ಸೇರಿದಂತೆ ಹಲವರು ಇದ್ದರು.