ಹೆಣ್ಣು ಸಿಗುತ್ತಿಲ್ಲ; ರೈತನ ಕೈ ಹಿಡಿಯುವ ವಧುವಿಗೆ ಪ್ರೋತ್ಸಾಹಧನ ಕೊಡಿ

mysore
Published on

ಮೈಸೂರು: ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.


ರೈತರ ಗೋಳು ಮುಗಿಲು ಮುಟ್ಟಿದೆ. ಅನೇಕ ಸಮಸ್ಯೆಗಳಿಂದ ರೈತರು ತತ್ತರಿಸಿ ಹೋಗಿದ್ದಾರೆ. ಇತ್ತೀಚೆಗೆ ಯುವ ರೈತರಿಗೆ ಹೆಣ್ಣೇ ಸಿಗುತ್ತಿಲ್ಲ. ಇದು ಕೌಟುಂಬಿಕ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಸ್ಪಂದಿಸುವುದನ್ನು ಬಿಟ್ಟು ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಹೆಣ್ಣು ಸಿಗದ ಬಹಳಷ್ಟು ಯುವ ರೈತರು 45 ವರ್ಷವಾದರೂ ಮದುವೆ ಆಗಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇದು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೃಷಿಗೂ ಆರ್ಥಿಕ ಅಂತಸ್ತು ಕಲ್ಪಿಸಿಕೊಡುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.


ಈ ಸಮಸ್ಯೆ ಮನಗಂಡು ರೈತ ಸಂಘದಿಂದ ಬೃಹತ್ ಸಮಾವೇಶವನ್ನು ಸಂಘಟಿಸಲಾಗುವುದು. ಈ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು. ಮುಂದಿನ ಮಾರ್ಚ್ ಹೊತ್ತಿಗೆ ಅನುಕೂಲಕರ ಸ್ಥಳದಲ್ಲಿ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗುವುದು. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮರಾಜು(9980183669), ಕಾರ್ಯದರ್ಶಿ ಬಸವರಾಜು(9538554204) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.


ಮುಂದಿನ ದಿನಗಳಲ್ಲಿ ವ್ಯವಸಾಯ ಮಾಡಲು ಯಾವುದೇ ರೈತರ ಮಕ್ಕಳು ಇಲ್ಲದಂತಾಗಲಿದೆ. ಕೃಷಿ ನಶಿಸಿ ಹೋಗುವ ಸಂಭವ ಕಾಣುತ್ತಿದೆ. ಆದ್ದರಿಂದ ರೈತ ಮಕ್ಕಳನ್ನು ಉತ್ತೇಜಿಸಲು ಸರ್ಕಾರ ಕ್ರಮ ವಹಿಸಬೇಕು. ಅದಕ್ಕಾಗಿ ಸರ್ಕಾರ, ಸರ್ಕಾರೇತರ ಕಚೇರಿಗಳ ಉದ್ಯೋಗಗಳಲ್ಲಿ ರೈತ ಕುಟುಂಬಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.


ಮುದ್ರಾ ಯೋಜನೆಯಡಿ ಸ್ವಯಂ ಉದ್ಯೋಗ, ಕೈಗಾರಿಕೆ ಸ್ಥಾಪನೆ, ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುವ ಮಾದರಿಯಲ್ಲೇ ಸರ್ಕಾರ ರೈತರ ಮಕ್ಕಳಿಗೂ ಕೃಷಿಗೆ ಸಂಬಂಧಿಸಿದ ವಾಣಿಜ್ಯ ಚಟುವಟಿಕೆ ಮಾಡಲು ಬಡ್ಡಿ ರಹಿತ ಸಾಲ ನೀಡಬೇಕು. ಇದರಿಂದ ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಜತೆಗೆ, ಕೌಟುಂಬಿಕ ಭದ್ರತೆಯೂ ಸಿಗಲಿದೆ ಎಂದು ತಿಳಿಸಿದರು.


ಸರ್ಕಾರದ ವತಿಯಿಂದಲೇ ಹೆಣ್ಣು ಮಕ್ಕಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಬೇಕು. ವಧು-ವರರ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸಬೇಕು. ಕೃಷಿಯಲ್ಲಿ ಹೆಣ್ಣು ಮಕ್ಕಳು ಕೂಡ ಗಮನಾರ್ಹವಾದ ಸಾಧನೆ ಮಾಡುತ್ತಿದ್ದಾರೆ. ಇಂತಹವರನ್ನು ಗುರುತಿಸಿ, ಸನ್ಮಾನಿಸಿ, ಪ್ರೋತ್ಸಾಹಧನ ನೀಡಬೇಕು. ಆ ಮೂಲಕ ಮತ್ತಷ್ಟು ಹೆಣ್ಣು ಮಕ್ಕಳು ಕೃಷಿ ಕಡೆಗೆ ಒಲವು ಮೂಡಲು ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.


ಸಂಘದ ಮುಖಂಡರಾದ ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net