ಇವರ ಹತ್ತಿರಕ್ಕೂ ಸುಳಿದಿಲ್ಲ ಕರೊನಾ

2-RNR-01
Published on

ರಾಣೆಬೆನ್ನೂರ: ನಗರದ ಅಡವಿ ಆಂಜನೇಯ ಬಡಾವಣೆ ಪಕ್ಕಾ ಸ್ಲಂ ಏರಿಯಾ. ಒಂದರ ಪಕ್ಕ ಒಂದು ಗುಡಿಸಲು ನಿರ್ವಿುಸಿಕೊಂಡು ಹಲವಾರು ವರ್ಷಗಳಿಂದ ನೂರಕ್ಕೂ ಹೆಚ್ಚು ಕುಟುಂಬ ಜೀವನ ನಡೆಸುತ್ತಿದೆ. ಇಲ್ಲಿ ಸ್ವಚ್ಛತೆ ಮರೀಚಿಕೆ. ಆದರೂ, ಇಲ್ಲಿಯ ಜನ ಕರೊನಾದಿಂದ ಮುಕ್ತರಾಗಿದ್ದಾರೆ. ಈವರೆಗೂ ಇಲ್ಲಿನ ಬಡಾವಣೆಗೆ ಕರೊನಾ ಕಾಲಿಟ್ಟಿಲ್ಲ.

ಕೊಳಚೆ ಪ್ರದೇಶದಲ್ಲಿ ಸೋಂಕು ಹರಡಿದರೆ ನಿಯಂತ್ರಣ ಕಷ್ಟ ಎಂದೇ ಭಾವಿಸಲಾಗಿದೆ. ಆದರೆ, ಇಲ್ಲಿಯ ನೂರಕ್ಕೂ ಹೆಚ್ಚು ಕುಟುಂಬಗಳ ಹತ್ತಿರವೂ ಕರೊನಾ ಸುಳಿಯದಿರುವುದು ವಿಶೇಷ. ಇವರಲ್ಲಿರುವ ವಂಶಪಾರಂಪರ್ಯ ರೋಗ ನಿರೋಧಕ ಶಕ್ತಿಯಿಂದಲೇ ಇವರು ಕರೊನಾದಿಂದ ದೂರವಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅಡವಿ ಆಂಜನೇಯ ಬಡಾವಣೆಯ ಜನರಿಗೆ ಯಾವ ನಿಯಮಾವಳಿಯೂ ಗೊತ್ತಿಲ್ಲ. ಈ ಹಿಂದೆ ಇವರು ದೇವರನ್ನು ಹೊತ್ತು ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದರು. ಕಾಲಾನಂತರ ಈ ಕುಲಕಸುಬು ಬಿಟ್ಟು ಕೂದಲು ಖರೀದಿ, ಗ್ಯಾಸ್ ಸ್ಟೋವ್ ರಿಪೇರಿ, ಗುಜರಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇವರತ್ತ ಕರೊನಾ ಸುಳಿಯದಿರುವುದು ಅಚ್ಚರಿಯೇ ಸರಿ.

ವಂಶಪಾರಂಪರ್ಯ ಶಕ್ತಿ...

ಯಾವ ಸೌಲಭ್ಯವೂ ಇಲ್ಲದ, ಸ್ವಚ್ಛತೆಯನ್ನು ಹುಡುಕಬೇಕಾದ ಇಂಥ ಪ್ರದೇಶದಲ್ಲಿ ಕರೊನಾ ಕಾಲಿಟ್ಟಿಲ್ಲ ಎಂಬುದು ಅಚ್ಚರಿಯ ಸಂಗತಿ. ಇವರು ವಾಸಿಸುವ ಸ್ಥಳದ ಪಕ್ಕದಲ್ಲಿರುವ ಒಂದಿಬ್ಬರಿಗೆ ಮೊದಲನೇ ಅಲೆಯಲ್ಲಿ ಪಾಸಿಟಿವ್ ಬಂದಿತ್ತು. ಅದನ್ನು ಹೊರತುಪಡಿಸಿದರೆ ಈವರೆಗೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಸದಾ ಮಳೆ, ಗಾಳಿ, ಬಿಸಿಲಿಗೆ ದೇಹ ಒಡ್ಡಿಕೊಂಡಿರುವ ಇವರು ಕಾಲಿಗೆ ಸರಿಯಾಗಿ ಚಪ್ಪಲಿ ಸಹ ಧರಿಸುವುದಿಲ್ಲ. ನೆಲದ ಮೇಲೆಯೇ ಊಟ, ನಿದ್ದೆ. ಆದರೂ ಇಲ್ಲಿರುವ ವೃದ್ಧರು, ಮಕ್ಕಳಾಗಲಿ ಯಾರ ಬಳಿಯೂ ಸೋಂಕು ಸುಳಿದಿಲ್ಲ. ವಂಶಪಾರಂಪರ್ಯವಾಗಿ ಅವರ ದೇಹದಲ್ಲಿರುವ ಶಕ್ತಿ, ಅತಿ ಹೆಚ್ಚು ಖಾರ ತಿನ್ನುವ ಇವರಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚು ಮಾಡಿದೆ. ಹೀಗಾಗಿ ಇವರಿಗೆ ಸೋಂಕು ತಗಲಿಲ್ಲ ಎಂಬುದು ವೈದ್ಯರ ಅಭಿಪ್ರಾಯ.

ನಾವು ನಿತ್ಯವೂ ಗ್ರಾಮೀಣ ಭಾಗದಲ್ಲಿ ಓಡಾಡಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬಂದು ಹೊಟ್ಟೆ ತುಂಬಿಸಿಕೊಳ್ಳುವವರು. ಆದರೆ, ಕರೊನಾ ಲಾಕ್​ಡೌನ್​ನಿಂದ ಯಾವ ಕೆಲಸವೂ ಇಲ್ಲದೆ ಗುಡಿಸಲಿನಲ್ಲೇ ಉಳಿದುಕೊಂಡಿದ್ದೇವೆ. ವಿವಿಧ ಸಂಘ ಸಂಸ್ಥೆಯವರು ನೀಡಿದ ಆಹಾರ ಧಾನ್ಯ ಕಿಟ್​ಗಳೇ ಲಾಕ್​ಡೌನ್​ನಲ್ಲಿ ಆಶ್ರಯವಾಗಿದ್ದವು. ದೇವರ ಕೃಪೆಯಿಂದ ಈವರೆಗೂ ಯಾರೂ ಸೋಂಕಿಗೆ ಒಳಗಾಗಿಲ್ಲ.| ಕಾವೇರಮ್ಮ, ಗುಡಿಸಲು ನಿವಾಸಿಅಡವಿ ಆಂಜನೇಯ ಬಡಾವಣೆ ಪಕ್ಕದಲ್ಲಿರುವ ಗುಡಿಸಲು ನಿವಾಸಿಗಳಿಗೆ ಯಾರಿಗೂ ಕರೊನಾ ಪಾಸಿಟಿವ್ ಬಂದಿಲ್ಲ. ಅವರು ಬೇರೊಬ್ಬರೊಂದಿಗೆ ಸಂಪರ್ಕ ಹೊಂದದೆ, ಗುಡಿಸಲಿನಲ್ಲೇ ಉಳಿದುಕೊಳ್ಳುತ್ತಿದ್ದರು. ನಗರದಿಂದ ಕೊಂಚ ಹೊರ ಭಾಗದಲ್ಲಿರುವ ಕಾರಣ ಆ ಭಾಗದಲ್ಲಿ ಸೋಂಕು ತಗುಲುವ ಸಾಧ್ಯತೆ ಕೂಡ ಕಡಿಮೆಯಿತ್ತು.| ಕಸ್ತೂರಮ್ಮ ಚಿಕ್ಕಬಿದರಿ, ನಗರಸಭೆ ಉಪಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net