

ಶಿವಮೊಗ್ಗ: ಪಠ್ಯಪುಸ್ತಕ ತಿದ್ದುಪಡಿ ವಿಚಾರದಲ್ಲಿ ಬಿಜೆಪಿಯ ಯಾವುದೇ ಟೀಕೆಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಪಠ್ಯವನ್ನು ತಿದ್ದುಪಡಿ ಮಾಡೇ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಲೋಚನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ಮಾನಸಿಕತೆಯನ್ನು ಅಳವಡಿಸಲಾಗಿತ್ತು. ಆದರೆ ಮಕ್ಕಳಿಗೆ ಸೂಕ್ಷ್ಮ ಶಿಕ್ಷಣದ ಅವಶ್ಯಕತೆ ಇದ್ದು ಅದಕ್ಕೆ ಪೂರಕವಾಗಿ ಶಾಲಾ ಮಟ್ಟದಿಂದಲೇ ಸಂವಿಧಾನ ಓದು ಮಕ್ಕಳಿಗೆ ಮನದಟ್ಟಾಗಬೇಕು. ಆಗ ಸಂವಿಧಾನದ ಪರಿಕಲ್ಪನೆ ಮಕ್ಕಳ ಮನಸ್ಸಿನಲ್ಲಿ ಬೇರುರುತ್ತದೆ. ಈ ಎಲ್ಲ ವಿಚಾರಗಳಿಂದ ಪಠ್ಯಪುಸ್ತಕ ತಿದ್ದುಪಡಿ ಅವಶ್ಯಕವಾಗಿದೆ ಎಂದರು.
ಬಿಜೆಪಿ ಪುಟ್ಟ ಮಕ್ಕಳ ಮನಸ್ಸಲ್ಲಿ ಏನೇನೋ ಕಲಿಸಲಾಗುತ್ತಿತ್ತು. ಇದರಿಂದ ಮಕ್ಕಳು ಎಲ್ಲಿಗೆ ತಲುಪುತ್ತಾರೆಂದು ಯೋಚಿಸುವಂತಾಗಿತ್ತು. ನಮ್ಮ ಸರ್ಕಾರ ಅದನ್ನು ಪರಿಷ್ಕರಣೆ ಮಾಡಿ ಸರಿಪಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನ ಮೇಲೆ ಭರವಸೆ ಇಟ್ಟು ಶಿಕ್ಷಣ ಖಾತೆ ನೀಡಿದ್ದಾರೆ. ಇದು ಸವಾಲು ಕೂಡ ಆಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ಹೇಳಿದರು.
ಬಿಜೆಪಿ ಸ್ವಾರ್ಥದ ರಾಜಕಾರಣದಿಂದ ತನ್ನ ಆಡಳಿದ ಅಂತ್ಯಕ್ಕೆ ನಾಂದಿ ಹಾಡಿಕೊಂಡಿದೆ. ಕೇವಲ ಹಿಂದುತ್ವ, ದ್ವೇಶದ ರಾಜಕಾರಣದಿಂದ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರ್ಚಿ ಬಗ್ಗೆ ಚಿಂತನೆ ಮಾಡಲಿ ಎಂದು ಸವಾಲು ಹಾಕಿದರು.
ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಾ ತಪ್ಪು ಸಂದೇಶ ನೀಡುತ್ತಿದ್ದಾರೆ. ಇವರಿಗಿನ್ನೂ ಸೋಲನ್ನು ಅರಗಿಸಿಕೊಳ್ಳುವ, ಒಪ್ಪಿಕೊಳ್ಳುವ ಶಕ್ತಿ ಬಂದೇ ಇಲ್ಲ. ಯಾವುದೇ ಸರ್ಕಾರ ದಿವಾಳಿಯಾಗುವುದು ಒಂದಿಬ್ಬರ ಮೇಲೆ ಅವಲಂಬಿತವಾದಾಗ ಮಾತ್ರ. ಕಾಂಗ್ರೆಸ್ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ಒಟ್ಟಾಗಿ ಚಿಂತನೆ ಮಾಡುತ್ತಿದೆ. ಘೋಷಿಸಿದ ಗ್ಯಾರಂಟಿಗಳನ್ನು ನೀಡೇ ನೀಡುತ್ತೇವೆ. ಆ ಚಿಂತೆ ಬಿಜೆಪಿಯವರಿಗೆ ಬೇಡ ಅವರು ಸದ್ಯಕ್ಕೆ ಮೋದಿ ಚಿಂತನೆ ಮಾಡಲಿ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವುದನ್ನು ಸಚಿವರು ಸರಿಪಡಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದಾರೆ. ಶಿಕ್ಷಕರ ಹುದ್ದೆಗಳ ತುಂಬುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿದ್ದಾರೆ ಎಂದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಮುಖಂಡರಾದ ಇಸ್ಮಾಯಿಲ್ ಖಾನ್, ಎನ್.ರವಿಕುಮಾರ್, ಎಸ್.ಕೆ.ಮರಿಯಪ್ಪ, ಎಚ್.ಸಿ.ಯೋಗೇಶ್, ಶಂಕರಘಟ್ಟ ರಮೇಶ್, ಸಿ.ಎಸ್.ಚಂದ್ರಭೂಪಾಲ್, ಎಚ್.ಪಿ.ಗಿರೀಶ್, ಎಸ್.ಪಿ.ಶೇಷಾದ್ರಿ, ಯಮುನಾ ರಂಗೇಗೌಡ, ಕೆ.ದೇವೇಂದ್ರಪ್ಪ, ಕಲೀಂ ಪಾಶಾ, ನಗರದ ಮಹದೇವಪ್ಪ, ಸ್ಟೆಲ್ಲಾ ಮಾರ್ಟಿನ್, ಬಲ್ಕಿಷ್ ಭಾನು, ಪ್ರೇಮಾ ಎಂ. ಶೆಟ್ಟಿ, ಅರ್ಚನಾ, ಗಂಗಾಧರ ಸೇರಿದಂತೆ ಹಲವರಿದ್ದರು.