ಮೋದಿ ಸೋಲಿಸಲು 23 ಪಕ್ಷಗಳ ಮಹಾಘಟಬಂಧನ್

mkg1
Published on

ಹೊನ್ನಾಳಿ: ಒಬ್ಬ ಅಪ್ರತಿಮ, ದೇಶಭಕ್ತ ಪ್ರಧಾನಿ ಮೋದಿಯನ್ನು ಸೋಲಿಸಲು 23 ಪಕ್ಷಗಳ ಮಹಾಘಟಬಂಧನ್ ರಚಿಸಿಕೊಂಡಿವೆ. ಆದರೆ, ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗುತ್ತೀರಿ ಎಂದು ಮೊದಲು ಹೇಳಿ. ಆಮೇಲೆ ಘಟಬಂಧನ್ ರಚಿಸಿಕೊಳ್ಳಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.

ಮಂಗಳವಾರ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 9ನೇ ವರ್ಷದ ಸಾಧನೆ ಮತ್ತು ಮಹಾ ಸಂಪರ್ಕ ಅಭಿಯಾನ ಸಮಾರಂಭದಲ್ಲಿ ಬೂತ್‌ಮಟ್ಟದ ಕಿಟ್ ವಿತರಿಸಿ ಅವರು ಮಾತನಾಡಿದರು.

ಅವರೆಲ್ಲ ಕೇವಲ ಫೋಟೋಶೂಟ್‌ಗಾಗಿ ಒಂದೆಡೆ ಸೇರಿ ಎರಡು ದಿನದ ಟ್ರಿಪ್‌ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಇವರಿಗೆ ಯಾವುದೇ ಸಿದ್ಧಾಂತಗಳಿಲ್ಲ. ಕೇವಲ ಮೋದಿ ವಿರೋಧಿಸುವುದೇ ಇವರ ಸಿದ್ಧಾಂತ ಎಂದು ಟೀಕಿಸಿದರು.

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವುದು ಶತಸಿದ್ಧ. ಇದನ್ನು ಯಾರು ತಪ್ಪಿಸಲಿಕ್ಕೆ ಸಾಧ್ಯವಿಲ್ಲ. ಕೇವಲ ಅಧಿಕಾರದ ಆಸೆಗಾಗಿ ತಮ್ಮ ಸಿದ್ಧಾಂತ ಗಾಳಿಗೆ ತೂರಿ ಒಂದಾಗುವುದನ್ನು ನೋಡಿದರೆ ಇವರಿಗೆ ದೇಶಕ್ಕಿಂತ ಅಧಿಕಾರ ಮುಖ್ಯ ಎನ್ನಿಸುತ್ತದೆ ಎಂದರು.
ನಮ್ಮ ಕಾರ್ಯಕರ್ತರು ಮೋದಿಯವರು 9 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆಗೆ ಹೋಗಿ ತಿಳಿಹೇಳಬೇಕು. ಇದೊಂದು ಮಹಾತ್ಕಾರ್ಯ ಎಂದು ತಿಳಿಯಿರಿ ಎಂದು ಹೇಳಿದರು.

ನಾನು ಕೋವಿಡ್‌ನಂಥ ಕಷ್ಟ ಕಾಲದಲ್ಲೂ ಹಾಗೂ ಸರ್ಕಾರಕ್ಕೆ ತೆರಿಗೆ ಬಾರದಂತಹ ಸಂದರ್ಭದಲ್ಲೂ ಮುಖ್ಯಮಂತ್ರಿಗಳಿಂದ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ಅದರಂತೆ ನೀವು ಮಾಡಿ ತೋರಿಸಿ ನೋಡೋಣ ಎಂದು ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ಸವಾಲು ಹಾಕಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಯಿತು. ಗ್ರಾಮಸ್ಥರು, ಅವರ ಪಕ್ಷದ ಕಾರ್ಯಕರ್ತರು ಶಾಸಕರ ಬಳಿ ಅನುದಾನ ಕೇಳಲು ಹೋದಾಗ, ಅಯ್ಯೋ ಎಲ್ಲ ದುಡ್ಡು ಅಕ್ಕಿಗೆ ಹೋಗ್ತಾ ಇದೆ ಕಣಪ್ಪ, ಅನುದಾನ ಇಲ್ಲ ಎಂದು ಹಾವ ಭಾವ ಪ್ರದರ್ಶನ ಮಾಡುವ ಮೂಲಕ ಸಾಗ ಹಾಕುತ್ತಿದ್ದಾರೆ ಎಂದರು.

ಜಿ.ಎಂ. ಸಿದ್ದೇಶಣ್ಣ ಅವರು ನಮ್ಮ ಹಿರಿಯ ನಾಯಕರು. ಈ ಹಿಂದೆ ಅವರು ಈ ಬಾರಿ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎನ್ನುವ ಸುದ್ದಿ ಕೇಳಿಬಂದಿತ್ತು. ಹಾಗಾಗಿ, ಅವಕಾಶ ಸಿಕ್ಕರೆ ಸ್ಪರ್ಧೆೆ ಮಾಡುವುದಾಗಿ ಹೇಳಿದ್ದೇನೆಯೇ ಹೊರತು ಟಿಕೆಟ್‌ಗಾಗಿ ನಾನು ಲಾಬಿ ಮಾಡುವುದಿಲ್ಲ. ಅವರಿಗೆ ಟಿಕೆಟ್ ಸಿಕ್ಕರೆ ನಾನು ಅವರಿಗೆ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ್‌ಗೌಡ, ಮುಖಂಡರಾದ ದಿಡಗೂರು ಫಾಲಾಕ್ಷಪ್ಪ, ಎಂ.ಎಸ್. ಫಾಲಾಕ್ಷಪ್ಪ, ಕೆ.ವಿ. ಚನ್ನಪ್ಪ, ಎಸ್.ಎಸ್. ಬೀರಪ್ಪ, ನಾಗರಾಜ್ ಮಾದೇನಹಳ್ಳಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್, ರವಿಕುಮಾರ್, ಸಿ.ಆರ್. ಶಿವಾನಂದ್, ಪುರಸಭೆೆ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್, ಮಹೇಶ್‌ಹುಡೇದ್, ಮಂಜುನಾಥ್ ಇಂಚರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net