ರಕ್ತದಾನ ಮಾಡಿದ ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ

New BD New
Published on

ಹುಬ್ಬಳ್ಳಿ : ಇಲ್ಲಿನ ಹೊಸೂರ ಪ್ರಾದೇಶಿಕ ಬಸ್​ ನಿಲ್ದಾಣದಲ್ಲಿ ಕೆಎಂಸಿಆರ್​ಐ ಸಹಯೋಗದೊಂದಿಗೆ ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗುರುವಾರ ಆಯೋಜಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಕೆಎಂಸಿಆರ್​ಐ ನಿರ್ದೇಶಕ ಡಾ. ಎಸ್​.ಎಫ್​. ಕಮ್ಮಾರ, ರಕ್ತದಾನ ಶ್ರೇಷ್ಠವಾದದ್ದು. ರಕ್ತದಾನ ಮಾಡುವವರ ಆರೋಗ್ಯವೂ ಉತ್ತಮವಾಗಿರುತ್ತದೆ. ರಕ್ತದಾನದಿಂದ ಯಾವುದೇ ತೊಂದರೆ ಆಗುವುದಿಲ್ಲ. ಬದಲಾಗಿ, ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಮಾತನಾಡಿ, ಆಧುನಿಕ ಜೀವನದಲ್ಲಿ ತಂತ್ರಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತದಾನ ಮಾಡಿದಾಗ ಮಾತ್ರ ಒಂದು ಜೀವ ಉಳಿಸಿಕೊಳ್ಳಲು ಸಾಧ್ಯ, ಕೆಲಮೊಂದು ರಕ್ತದ ಗುಂಪು ಸಿಗುವುದೇ ಅಪರೂಪ. ಆದಕಾರಣ ಸಂಸ್ಥೆಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ತಿಳಿಸಿದರು.

ಕೆಎಂಸಿಆರ್​ಐ ರಕ್ತ ಭಂಡಾರದ ಅಧಿಕಾರಿ ಡಾ. ಅನಿಲಕುಮಾರ ಮಾತನಾಡಿ, ರಕ್ತ ನೀಡುವುದರಿಂದ ಅಶಕ್ತರಾಗುತಾರೆ ಎಂಬ ತಪ್ಪು ಕಲ್ಪನೆ ಇದೆ. ಪದೇ ಪದೆ ರಕ್ತದಾನ ಮಾಡುವವರಿಗೆ ಹೃದಯಾಘಾತ ಸಂಭವಿಸುವದಿಲ್ಲ ಮತ್ತು ಮೂರು ವಾರಗಳಲ್ಲಿ ಹೊಸ ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ಇದೊಂದು ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ ಎಂದು ಹೇಳಿದರು.

ಸಂಸ್ಥೆಯ 116 ಸಿಬ್ಬಂದಿ ರಕ್ತದಾನ ಮಾಡಿದರು. 10 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಸಂಸ್ಥೆಯ 11 ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net