

ಹುಬ್ಬಳ್ಳಿ : ಕಾನೂನು ಅಭಿಪ್ರಾಯ ಪಡೆದು ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಒಂದು ಸಾವಿರ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1,500 ಜನ ಚಾಲಕ-ನಿರ್ವಾಹಕರ ಬೇಡಿಕೆ ಇದೆ. ಈ ಹಿಂದೆ ಚಾಲಕ ಪರೀಕ್ಷೆ ನೀಡಿದವರನ್ನೇ ನೇಮಕಾತಿ ಮೊಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
2019ರಿಂದ 2023ರವರೆಗೆ ಸಾರಿಗೆ ಸಂಸ್ಥೆಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಈ ಅವಧಿಯಲ್ಲಿ 14ಸಾವಿರ ಜನ ನಿವೃತ್ತಿ ಹೊಂದಿದ್ದರೂ ನೇಮಕಾತಿಗೆ ಹಿಂದಿನ ಸರ್ಕಾರ ಮುಂದಾಗಿರಲಿಲ್ಲ ಎಂದು ಹೇಳಿದರು.
ನಾನು ಸಚಿವನಾದ ನಂತರ ಸಾರಿಗೆ ಸಂಸ್ಥೆಯ ನಾಲ್ಕೂ ವಿಭಾಗಗಳಲ್ಲಿ 8 ಸಾವಿರ ಜನರ ನೇರ ನೇಮಕಾತಿ ಹಾಗೂ ಒಂದು ಸಾವಿರ ಜನರ ಅನುಕುಂಪ ಆಧಾರದಡಿ ನೇಮಕಾತಿ ಸೇರಿದಂತೆ ಒಟ್ಟು 9 ಸಾವಿರ ಜನರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಒಂದೂ ನೇಮಕಾತಿ ನಡೆಯಲಿಲ್ಲ. ಹಿಂದಿನ ಸರ್ಕಾರ ಸಾರಿಗೆ ಸಂಸ್ಥೆಗಾಗಿ 4 ಸಾವಿರ ಕೋಟಿ ರೂ. ಸಾಲ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 2 ಸಾವಿರ ಕೋಟಿ ರೂ. ಸಾಲ ತೀರಿಸಿದ್ದಾರೆ ಎಂದರು.
ಸಾರಿಗೆ ಸಂಸ್ಥೆಯ ನಾಲ್ಕೂ ವಿಭಾಗಳಲ್ಲಿ ಮೆಕಾನಿಕಲ್ ಸೇರಿದಂತೆ ಇನ್ನಿತರ ತಾಂತ್ರಿಕ ಸಿಬ್ಬಂದಿ ನೇಮಕವನ್ನು ಶೀಘ್ರ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಆರ್ಟಿಒ ಕಚೇರಿ ಒಳಗೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಯಾವುದೇ ಏಜೆಂಟ್ರಗಳಿಗೆ ಕಚೇರಿವೊಳಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಖಜಾನೆ : ದೇವಸ್ಥಾನದ ಹಣ ಸರ್ಕಾರಿ ಖಜಾನೆಗೆ ಬರುವುದಿಲ್ಲ. ಯಾವುದೇ ಹಿಂದು ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆ ಹಣ ಸರ್ಕಾರದ ಖಜಾನೆಗೆ ಬರುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲ, ಒಂದು ದೇವಸ್ಥಾನದ ಹಣವನ್ನು ಮತ್ತೊಂದು ದೇವಸ್ಥಾನಕ್ಕೆ ಉಪಯೋಗಿಸದಂತೆ ಕಾನೂನು ರೂಪಿಸಲಾಗಿದೆ. ಆದರೆ, ಬಿಜೆಪಿಯವರು ಜನರ ದಾರಿ ತಪ್ಪಿಸುವ ಉದ್ದೇಶದಿಂದ ಹಿಂದು ದೇವಸ್ಥಾನಗಳಿಗೆ ಭಕ್ತರು ನೀಡುವ ಕಾಣಿಕೆವನ್ನು ಅನ್ಯ ಜಾತಿಯವರ ಯಾತ್ರೆಗೆ ಬಳಸಲಾಗುತ್ತದೆಯೆಂದು ಸುಳ್ಳು ಹೇಳುತ್ತಾರೆ ಎಂದರು.
ಲಕ್ಷಾಂತರ ಭಕ್ತರು ಭೇಟಿ ನೀಡುವ ಹಿಂದು ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸವದತ್ತಿಯ ರೇಣುಕಾ ಎಲ್ಲಮ್ಮ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಅವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಅದೇ ಕಾರಣಕ್ಕೆ ಸಾಧನಾ ಸಮಾವೇಶ ಮಾಡಲಾಗುತ್ತಿದೆ. ಆದರೆ, ಈ ಹಿಂದೆ 4 ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಯಾವುದೇ ಸಾಧನೆ ಮಾಡಲಿಲ್ಲ. ಹಾಗಾಗಿ, ಬಿಜೆಪಿಯವರು ಸಾಧನಾ ಸಮಾವೇಶ ಮಾಡಲಿಲ್ಲ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪೂರ್ಣಪ್ರಮಾಣದ ಅವಧಿ ಪೂರೈಸಲಿದ್ದಾರೆ. ಈ ಕುರಿತು ಹೆಚ್ಚಿಗೆ ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟ್ಟಾಜ್ಞೆ ಮಾಡಿದ್ದಾರೆ ಎಂದರು.
ವಾಯವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ ಕೌತಾಳ, ಎಂಡಿ ಪ್ರಿಯಾಂಗ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಮ್ ನಿರ್ವಾಹಕರ ನೇಮಕಾತಿಗೆ ಆಗ್ರಹಿಸಿ ಇದೇ ಸಂದರ್ಭದಲ್ಲಿ ಹೋರಾಟಗಾರ ಸುಭಾಷಸಿಂಗ್ ಜಮಾದಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.