

ಚಿಕ್ಕಬಳ್ಳಾಪುರ: ಮಳೆ ಪ್ರಾರಂಭವಾಗುತ್ತಿದ್ದಂತೆ ಗೌರಿಬಿದನೂರು ನಗರಕ್ಕೆ ಹೊಂದಿಕೊಂಡಿರುವ ನದಿ ದಡದ ವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು ಯಾವಾಗ ಉತ್ತರ ಪಿನಾಕಿನಿ ಉಕ್ಕಿ ಹರಿಯುತ್ತದೆಯೋ?, ಮನೆಗಳಿಗೆ ನೀರು ನುಗ್ಗಿ ಏನು ಅವಾಂತರ ಸಂಭವಿಸುತ್ತದೆಯೋ ಎಂಬ ಜೀವ ಭಯದೊಂದಿಗೆ ಜನ ಬದುಕುವಂತಾಗಿದೆ.
ಗೌರಿಬಿದನೂರು ತಾಲೂಕಿನಲ್ಲಿ ಹರಿಯುವ ಏಕೈಕ ನದಿ ಉತ್ತರ ಪಿನಾಕಿನಿ. ಇದು ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ಉಕ್ಕಿ ಹರಿಯುತ್ತದೆ. ಆಗ ನದಿ ದಡದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸ್ಥಳೀಯ ವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದಿನಸಿ ಸೇರಿದಂತೆ ಎಲ್ಲ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ರಾತ್ರಿಯೆಲ್ಲ ಜಾಗರಣೆ ಮಾಡಬೇಕು. ಕಳೆದ ಬಾರಿ ಕೂಡ ಟಿಪ್ಪು ನಗರದ ಮನೆಗಳಿಗೆ ನೀರು ನುಗ್ಗಿ ನೂರಾರು ಕುಟುಂಬಗಳು ನಿರಾಶ್ರಿತರಾಗಿದ್ದರು. ಅವರಿಗೆ ಸಮೀಪದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಆಶ್ರಯದ ವ್ಯವಸ್ಥೆಯನ್ನು ತಾಲೂಕು ಆಡಳಿತದಿಂದ ಕಲ್ಪಿಸಲಾಗಿತ್ತು. ಇದು ಕೇವಲ ಒಂದು ವರ್ಷದ ಸಮಸ್ಯೆಯಲ್ಲ. ನದಿ ಉಕ್ಕಿ ಹರಿದಾಗಲೆಲ್ಲಾ ತಪ್ಪದೇ ಬರುವ ಸಂಕಷ್ಟ. ಮಳೆಗಾಲದಲ್ಲಿ ಕಂದಾಯ, ನೀರಾವರಿ ಇನ್ನಿತರ ಇಲಾಖೆಗಳು ನದಿ ನೀರು ಒಳ ನುಗ್ಗದಂತೆ ತಡೆಗೋಡೆ ನಿರ್ಮಿಸುವ ತಾತ್ಕಾಲಿಕ ಕೆಲಸದಲ್ಲಿ ತೊಡಗಿವೆ.
*ಶಾಶ್ವತ ಪರಿಹಾರವಿಲ್ಲ*
ನದಿ ದಡದಲ್ಲಿ ವಾಸುತ್ತಿರುವರೆಲ್ಲ ಬಹುತೇಕ ನಿರ್ಗತಿಕರು. ಸ್ವಂತ ಸೂರಿಲ್ಲದ ಬಡವರು ಇಲ್ಲಿ ದಶಕಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಬದುಕನ್ನ ಕಟ್ಟಿಕೊಂಡಿದ್ದಾರೆ. ಹಿಂದೆ ಪುರಸಭೆಯಿದ್ದಾಗ ಮಾನವೀಯ ದೃಷ್ಟಿಯಿಂದ ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿಕೊಡಲಾಗಿದೆ. ಆದರೆ, ಶಾಶ್ವತ ಪರ್ಯಾಯ ವ್ಯವಸ್ಥೆಗೆ ಸ್ಥಳೀಯರು ದಶಕದಿಂದಲೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.
ನದಿ ದಡದ ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಲಾಗಿದೆ. ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಪ್ರಸ್ತುತ ಮಳೆಗಾಲದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ತಿಳಿಸಿದ್ದಾರೆ.