ಎನ್ಇಪಿ ಸರ್ವತೋಮುಖ ಬೆಳವಣಿಗೆಗೆ ಪೂರಕ,ಹುಬ್ಬಳ್ಳಿಯಲ್ಲಿ ಶಿಕ್ಷಣ ತಜ್ಞರ ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಜೋಶಿ

IMG_20240120_220224_927.jpg
Published on

ಹುಬ್ಬಳ್ಳಿ: ಪ್ರತಿ ಮಗುವಿನಲ್ಲೂ ಏನಾದರೂ ಒಂದು ಕೌಶಲ ಅಡಗಿರುತ್ತದೆ, ಅದನ್ನು ಗುರುತಿಸಿ ಹೊರತೆಗೆಯುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ, ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ಮಾತೃಭಾಷೆಯ ಮೂಲಕ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಭಾರತದ ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿಯ ಕೇಶ್ವಾಪುರದ ಖಾಸಗಿ ಹೋಟೆಲ್ ಆವರಣದಲ್ಲಿ ಶನಿವಾರ ತಾಲೂಕಿನ ವರೂರ ಎಜಿಎಂ ರೂರಲ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ಉತ್ತರ ಕರ್ನಾಟಕ ಭಾಗದ ಶಿಕ್ಷಣ ತಜ್ಞರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಜತೆಗೆ ಸಂಸತಿ, ಕ್ರೀಡೆ ಮುಂತಾದವುಗಳ ಬಗ್ಗೆಯೂ ತಿಳಿವಳಿಕೆ ನೀಡಬೇಕಾಗಿದೆ. ವಿದ್ಯಾಥಿರ್ಗಳಲ್ಲಿ ಕೌಶಲ, ಕ್ರಿಯಾಶೀಲತೆ ಬೆಳೆಸಬೇಕು. ಕೇವಲ ಅಂಕಗಳಿಂದ ಯಾವುದೇ ಮಗುವನ್ನು ಅಳೆಯಬಾರದು ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ ಭಾರತ ಯುವ ದೇಶವಾಗಿದೆ. ಮೆಕಾಲೆ ಶಿಕ್ಷಣ ಪದ್ಧತಿಯಿಂದ ಹೊರಗೆ ಬರಬೇಕಾಗಿದೆ. ವಿಶ್ವದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಶಕ್ತಿ ಈಗ ಭಾರತಕ್ಕೆ ಬಂದಿದೆ. ಹಾಗಾಗಿ ಜಗತ್ತು ನಮ್ಮ ದೇಶದತ್ತ ಗಮನ ಹರಿಸುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರು ಮಾಡಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಯುವಾಚಾರ್ಯ ಶ್ರೀಗುಣಧರನಂದಿ ಮಹಾರಾಜರು ವರೂರು ಗ್ರಾಮವನ್ನು ಭೂಪಟದಲ್ಲಿ ಕಾಣುವಂತೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಪಾಲಕರು ಇಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳು ಮನೆಯಲ್ಲಿದ್ದು ಕಲಿಯುವುದರಿಂದ ಸಂಸ್ಕಾರವಂತರಾಗುತ್ತಾರೆ. ಮನೆ ಬಿಟ್ಟು ಬೇರೆಡೆ ಇಟ್ಟು ಮಕ್ಕಳನ್ನು ಕಳುಹಿಸಿ ಶಿಕ್ಷಣ ಕೊಡಿಸುವುದು ಅಪರಾಧ ಎಂದು ಭಾವಿಸುತ್ತೇನೆ ಎಂದರು.

ಬೆಳಗಾವಿ ವಿಟಿಯು ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿ, ವಿದ್ಯಾಥಿರ್ಗಳಿಗೆ ಗುಣಮಟ್ಟದ ಕೌಶಲ ಆಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ವಿದ್ಯಾಥಿರ್ಗಳಲ್ಲಿ ಕೌಶಲದ ಕೊರತೆ ಕಾಡುತ್ತಿದೆ. ಇದನ್ನು ಹೆಚ್ಚಿಸುವುದು ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಣ ಪೂರೈಸುತ್ತಲೇ ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಜಿಎಂ ಕಾಲೇಜಿನ ನಿರ್ದೇಶಕ ಸಂದೀಪ ಕ್ಯಾತನವರ, ಉತ್ತರ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳು ಸ್ಪರ್ಧೆಗಿಳಿಯದೇ ಗುಣಮಟ್ಟದ ಶಿಕ್ಷಣ ಒದಗಿಸುವತ್ತ ಗಮನ ಹರಿಸಬೇಕು. ಅಂದಾಗ ಮಾತ್ರ ಈ ಭಾಗದ ವಿದ್ಯಾಥಿರ್ಗಳು ದಕ್ಷಿಣ ಕರ್ನಾಟಕಕ್ಕೆ ಹೋಗುವುದನ್ನು ನಿಲ್ಲಿಸಬಹುದು. ಪಾಲಕರು ಸಹ ಈ ಭಾಗದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಮೇಲೆ ವಿಶ್ವಾಸ ಇಡಬೇಕು ಎಂದು ಹೇಳಿದರು.

ಯುವಾಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಕವಿವಿ ಕುಲಪತಿ ಕೆ.ಬಿ. ಗುಡಸಿ, ಅರಸು ಎಂ., ಕರ್ನಾಟಕ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಮಾಜಿ ಮೇಯರ್ ಅನಿಲ ಪಾಟೀಲ, ಜೈನ ಸಮಾಜದ ರಾಜೇಂದ್ರ ಬೀಳಗಿ, ವಿಮಲ್ ತಾಳಿಕೋಟಿ, ವಿನಾಯಕಸಿಂಗ್ ರಜಪೂತ, ಇತರರು ಇದ್ದರು.

ರೇಶ್ಮಾ ವೈ. ಪ್ರಾರ್ಥನೆ ಹಾಡಿದರು. ಪ್ರೊ. ವಿದ್ಯಾರಾಣಿ, ಪ್ರೊ. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net