

ಮುಂಡರಗಿ: ಉತ್ತರ ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರದ ಉಡಾನ್ ಕಾರ್ಯಕ್ರಮ ಮತ್ತೆ ಪ್ರಾರಂಭವಾದರೆ ಅನುಕೂಲವಾಗುತ್ತದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲಾ ಆವರಣದಲ್ಲಿ ಎಪಿಎಂಸಿ ವರ್ತಕರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಬಿಟ್ಟರೆ ಬೇರೆಡೆಗೆ ಇಲ್ಲ. ವಿಶೇಷವಾಗಿ ಬೆಳಗಾವಿ ತರಕಾರಿ ಬೆಳೆಯುವಲ್ಲಿ ಬಹಳ ಮುಂಚೂಣಿಯಲ್ಲಿದೆ. ಅಲ್ಲಿ ಬೆಳೆದ ತರಕಾರಿ ಹೊರದೇಶಕ್ಕೆ ಕಳುಹಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದರು.
ನೀರಾವರಿ ಯೋಜನೆಗೆ ಒತ್ತು ಕೊಡಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆ ಸಮರ್ಪಕವಾಗಿ ನಡೆದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಶೀತಲೀಕರಣ ಘಟಕ ಸ್ಥಾಪನೆ, ಜನರಿಗೆ ಸಹಕಾರಿಯಾಗುವಂತಹ ಮುಂಡರಗಿ ಮೂಲಕ ಗದಗ-ಹರಪನಹಳ್ಳಿ ರೈಲು ಮಾರ್ಗ ಸೇರಿ ಎಪಿಎಂಸಿ ವರ್ತಕರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರೈತರು ಎಪಿಎಂಸಿಯಲ್ಲಿ ತಮ್ಮ ಫಸಲಿನ ಮಾರಾಟದಿಂದ ಬಂದ ಹಣದಿಂದ ತಮ್ಮ ಅಗತ್ಯ ಸಾಮಗ್ರಿ ಖರೀದಿಸುವುದು ಸಹಜ. ಹೀಗಾಗಿ, ಹಣದ ಚಲಾವಣೆಗೆ ಎಪಿಎಂಸಿ ಸಹಕಾರಿಯಾಗುತ್ತದೆ. ಎಲ್ಲ ವ್ಯಾಪಾರ ಸುಗಮವಾಗಿರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಯಾವುದೇ ಹಂತದಲ್ಲಿ ಮೋಸ ಆಗದಂತೆ ಮಧ್ಯವರ್ತಿಗಳು ಕಾಳಜಿ ವಹಿಸಬೇಕು. ರೈತರ ಹಿತ ಕಾಪಾಡುವುದು ಮುಖ್ಯ. ದೇಶದ ಭವಿಷ್ಯ ರೂಪಿಸುವಲ್ಲಿ ರೈತ, ಸೈನಿಕ, ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಂಕರಣ್ಣ ಮುನವಳ್ಳಿ, ಡಾ.ಜಿ.ಬಿ. ಬೀಡನಾಳ, ಡಾ.ವೀರೇಶ ಹಂಚಿನಾಳ, ಪ್ರಶಾಂತ ತಾವರಗೇರಿ, ಬಿ.ಶಿವರಾಮರಡ್ಡಿ, ತಾತನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೊಟ್ರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ಮಹನ್ಯಾ ಪಾಟೀಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಶ್ವಿನಿ ಗೌಡರ್ ಸಾಧಕರ ಪರಿಚಯ ಮಾಡಿಕೊಟ್ಟರು. ವೆಂಕಟೇಶ ಹೆಗ್ಗಡಾಳ ಬೇಡಿಕೆಗಳ ಮನವಿ ಪತ್ರ ಓದಿದರು. ಕರಬಸಪ್ಪ ಹಂಚಿನಾಳ, ಪವನ್ ಚೋಪ್ರಾ, ಮುದಕಪ್ಪ ಬೆಟಗೇರಿ, ಭರಮಜ್ಜ ಬೀಡನಾಳ, ಅಮೀನಸಾಬ್ ಬಿಸನಳ್ಳಿ, ನಾಗರಾಜ ಹೆಗ್ಗಡಾಳ ಇತರರು ಇದ್ದರು. ವರ್ತಕ ವೀರಣ್ಣ ಮೇಟಿ ಸ್ವಾಗತಿಸಿದರು. ಎಸ್.ಎಂ. ಅಗಡಿ ಕಾರ್ಯಕ್ರಮ ನಿರೂಪಿಸಿದರು.