ಉತ್ತರ ಕರ್ನಾಟಕ ನಿಷ್ಕಾಳಜಿ ಸಲ್ಲ

SANKJANUR
Published on

ಮುಂಡರಗಿ: ಉತ್ತರ ಕರ್ನಾಟಕದ ಜನ ಅತ್ಯಂತ ಮುಗ್ಧರು. ಈ ಭಾಗದಲ್ಲಿ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ಯಾವಾಗ ಪ್ರತ್ಯೇಕತೆಗಾಗಿ ಕೂಗು ಪ್ರಾರಂಭವಾಗುತ್ತದೆಯೋ ಗೊತ್ತಿಲ್ಲ. ಆದರೆ, ಮುಂದೊಂದು ದಿನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ವಿಷಯದಲ್ಲೂ ಉತ್ತರ ಕರ್ನಾಟಕದ ಬಗ್ಗೆ ನಿಷ್ಕಾಳಜಿ ವಹಿಸಲಾಗುತ್ತಿದೆ. ಸರ್ಕಾರ ರಚನೆ ಮಾಡುವ ಪಕ್ಷದವರಿಗೆ ಹೆಚ್ಚು ಶಾಸಕರನ್ನು ಕೊಡುವುದು ಉತ್ತರ ಕರ್ನಾಟಕ ಭಾಗ. ಹೀಗಾಗಿ ನಿಷ್ಕಾಳಜಿ ಮಾಡುವುದು ಸರಿಯಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಸಾಧನೆ ಮಾಡಲು ಸತತ ಪರಿಶ್ರಮ ಪಡಬೇಕು. ಭಾರತವನ್ನು ಜ್ಞಾನ ಮತ್ತು ಕೌಶಲದಲ್ಲಿ ಜಗತ್ತಿನಲ್ಲೇ ನಂ.1 ರಾಷ್ಟ್ರವನ್ನಾಗಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಸ್ವಾಭಿಮಾನಿ ಸದೃಢ ರಾಷ್ಟ್ರ ಕಟ್ಟುವ ಯೋಜನೆಯಿಂದಾಗಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ ಎಂದರು.

ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಗುರಿ ಇದ್ದರೆ ಯಶಸ್ಸಿನ ಗರಿಮೆ ನಮಗೆ ದೊರೆಯುತ್ತದೆ. ಶಿಸ್ತಿನಿಂದ ಸುಂದರ ಜೀವನ ಕಟ್ಟಿಕೊಳ್ಳಬೇಕು. ಯುವ ಪೀಳಿಗೆಯ ಶಕ್ತಿ ದೊಡ್ಡದು ಎಂದರು.

ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಕೊಟ್ರೇಶ ಅಂಗಡಿ ಮಾತನಾಡಿದರು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಪುರಸಭೆ ಸದಸ್ಯೆ ಕವಿತಾ ಉಳ್ಳಾಗಡ್ಡಿ, ಪ್ರಾಚಾರ್ಯ ಎಸ್.ಆರ್. ಚಿಗರಿ, ಎಚ್.ಎಂ. ಹೊಸಗಾಣಿಗೇರ, ವೆಂಕಟೇಶ ಝಳಕಿ, ಅನಿತಾ ಬೂದಿಹಾಳ, ಇತರರು ಇದ್ದರು. ಡಾ.ನಾಗರಾಜ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕಿ ಅಕ್ಕಮಹಾದೇವಿ ಹಿರೇಮಠ ವರದಿ ವಾಚಿಸಿದರು. ಡಾ. ಜೆ.ಸಿ. ಹುಲ್ಲೂರ ಸ್ವಾಗತಿಸಿದರು. ಉಪನ್ಯಾಸಕ ಬಿ.ಎಸ್. ಸಸಿಮಠ, ಡಾ.ಮಿಟ್ಯಾ ನಾಯ್ಕ ನಿರೂಪಿಸಿದರು. ಡಾ.ಭಾರತಿ ಬ್ಯಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net