

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ನೂರೊಕ್ಕಂಡ್ ಹಿಲ್ಸ್- ಕತ್ತಲೆಕಾಡು ರಸ್ತೆ ಕಾಮಗಾರಿಗೆ ಭಾನುವಾರ ವಿಶ್ವ ಹಿಂದೂ ಸಮಿತಿ (ವಿಎಚ್‌ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಜಗದೀಶ್ ಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ರಾಜ್ಯಸಭೆ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ ಈ ರಸ್ತೆ ಕಾಮಗಾರಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ೧.೫೦ ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಡಾ.ಸುಬ್ರಮಣ್ಯನ್ ಸ್ವಾಮಿ ಅನುದಾನ ಮಂಜೂರು ಮಾಡಿದ್ದಾರೆ. ಈ ಹಣದಲ್ಲಿ ಯಾರಿಗೂ ಕಮಿಷನ್ ನೀಡಬೇಕಾಗಿಲ್ಲ. ಹೀಗಾಗಿ ಗುಣಮಟ್ಟದ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಜಗದೀಶ್ ಶೆಟ್ಟಿ ಹೇಳಿದರು. ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಗಮನ ಸೆಳೆದ ಹಿನ್ನೆಲೆಯಲ್ಲಿ ಈ ಅನುದಾನ ಮಂಜೂರಾಗಿದೆ ಎಂದರು.
ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ತಮ್ಮ ಮನವಿ ಮೇಲೆ ಡಾ.ಸುಬ್ರಮಣ್ಯನ್ ಸ್ವಾಮಿ ಅನುದಾನ ಮಂಜೂರು ಮಾಡಿದ್ದಾರೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗುವುದೆಂದು ಸಿಎನ್‌ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ಹೇಳಿದರು.
ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಪ್ರಮೋದ್, ಸಮಾಜ ಸೇವಕ ಪೋರಿಮಂಡ ದಿನಮಣಿ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಪೊರಿಮಂಡ ತಂಗಮ್ಮ ಲೋಕೇಶ್ ಮತ್ತಿತರರು ಇದ್ದರು.