

ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆ ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿಯಾಗಲು ಕಾರಣರಾದ ನಗರ ಠಾಣೆ ಪಿಎಸ್‌ಐ ರಮೇಶ್ ಅವರನ್ನು ಗ್ರಾಮಸ್ಥರು ಗೌರವಿಸಿದರು.
ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪೊಲೀಸ್ ವೃಂದಕ್ಕೆ ಕೃತಜ್ಞತೆ ಸಲ್ಲಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಪಿಎಸ್‌ಐ ರಮೇಶ್, ಸಾರ್ವಜನಿಕರ ಸಹಭಾಗಿತ್ವ, ಸಹಕಾರ ಇದ್ದರೆ ಪೊಲೀಸರ ಕೆಲಸ ಸುಲಲಿತವಾಗುತ್ತದೆ. ನೂಲಿಗ್ಗೇರಿಯ ಗಣೇಶೋತ್ಸವ ಸಾಮರಸ್ಯದಿಂದ ಕೂಡಿತ್ತು, ಯುವಕರ ಕಾಳಜಿ ಉತ್ತಮವಾಗಿದೆ. ಎಲ್ಲಾ ಒಳ್ಳೆಯ ಕಾರ್ಯಕ್ರಮಗಳಿಗೆ ಪೊಲೀಸರ ಸಹಕಾರ ಇರುತ್ತದೆ ಎಂದರು.
ಪೊಲೀಸರಾದ ವೆಂಕಟೇಶ್, ಪ್ರವೀಣ್‌ಕುಮಾರ್, ಮಂಜುನಾಥ್, ವಿಶ್ವನಾಥ, ಶಾಂತಪ್ಪ, ಸಮಿತಿ ಅಧ್ಯಕ್ಷ ಮುರುಗೇಶಪ್ಪ, ಹರೀಶ ರಾವ್, ಆನಂದ ಶೆಟ್ಟಿ, ಅಬೂಬಕರ್, ನಾಗೇಂದ್ರ, ಮುಜಾಫರ್ ಇತರರಿದ್ದರು. ನೂಲಿಗ್ಗೇರಿಯ ಗಣಪತಿ ವಿಸರ್ಜನಾ ಮೆರವಣಿಗೆ ಬುಧವಾರ ಯಶಸ್ವಿಯಾಗಿ ನಡೆಯಿತು. ಜಯಘೋಷ, ಹಾಡು ಕುಣಿತದೊಂದಿಗೆ ಮೆರವಣಿಗೆ ಸಾಗಿ ಚಿಕ್ಕಪೇಟೆ ಕಲಾವತಿ ನದಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು.