ಅಹಿಂಸೆ, ದಯೆ ಜೈನ ಧರ್ಮದ ಮಂತ್ರ

20ATHANIGRAMIN1
Published on

ಅಥಣಿ ಗ್ರಾಮೀಣ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವ ವ್ಯಕ್ತಿಯ ಕರ್ಮಾದಿಗಳು ಕಳೆದು ಪಾವನವಾಗುತ್ತಾನೆ ಎಂದು ಸಾಧನಾರತ್ನ ಆಚಾರ್ಯ ಶ್ರೀ 108 ಅಮೀತಸೇನ ಮುನಿಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಝುಂಜರವಾರಡ ಗ್ರಾಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಮಹಾಮಹೋತ್ಸವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೀಕ್ಷಾ ಕಲ್ಯಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜೈನ ಧರ್ಮವು ಸತ್ಯ, ನೀತಿ, ಉತ್ತಮ ನಡವಳಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಅಹಿಂಸೆ ಮತ್ತು ದಯೆಯನ್ನು ಮೂಲ ಮಂತ್ರವನ್ನಾಗಿಸಿಕೊಂಡಿವೆ. ಜೈನ ಧರ್ಮ ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಮೂರು ಪ್ರಮಾಣಗಳನ್ನು ಅಂಗೀಕರಿಸುತ್ತದೆ ಎಂದರು.

ಪಪೂ ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿಮಹಾರಾಜರು ಮಾತನಾಡಿ, ಕೃಷಿ ಹಾಗೂ ಋಷಿಮುನಿಗಳಿಲ್ಲದ ಜಗತ್ತು ಶೂನ್ಯ. ಋಷಿಮುನಿಗಳು ರಾಜ ವೈಭೋಗ ಬಿಟ್ಟು ಶಾಂತಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಭೋಗಕ್ಕಿಂತ ತ್ಯಾಗ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ್ದಾರೆ. ಎಲ್ಲರೂ ದುಶ್ಚಟಗಳನ್ನು ದೂರ ಮಾಡಿ ಸದ್ಗುಣಗಳ ದೀಕ್ಷೆ ತೊಡಬೇಕು ಎಂದು ತಿಳಿಸಿದರು.

ಮುಖಂಡ ಚಿದಾನಂದ ಸವದಿ ಮಾತನಾಡಿ, ಝುಂಜರವಾಡ ಗ್ರಾಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಮಹಾಮಹೋತ್ಸವ ತಾಲೂಕಿನ ಇತಿಹಾಸದಲ್ಲಿ ಮೈಲುಗಲ್ಲಾಗಲಿದೆ. ಈ ಮಹೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ ಎಂದು ಹೇಳಿದರು.

ಇದಕ್ಕೂ ಪೂರ್ವ ಮಂಗಲವಾದ್ಯಘೋಷ, ಸುಪ್ರಭಾತ ಸ್ತೋತ್ರ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ಸೇರಿ ಹಲವು ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಶ್ರಾವಕರು ಹಾಗೂ ಕಲಾವಿದರು ನಡೆಸಿದ ಕಲೆಯ ರೂಪಕ ಜನರ ಮನಸೂರೆಗೊಂಡಿತು.

ಪಪೂ ಆಚಾರ್ಯ ಶ್ರೀ 108 ಅಮಿತ ಸೇನ ಮುನಿಮಹಾರಾಜರು, ಪಪೂ ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮುನಿಮಹಾರಾಜರು, ಪಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು, ಪಪೂ ಶ್ರೀ 105 ಅಕ್ಷಯಸೇನ ಮಹಾರಾಜರು, ಪಪೂ ಶ್ರೀ 105 ಅನಂತಸೇನ ಮಹಾರಾಜರು, ಬಾಹುಬಲಿ ಉಪಾಧ್ಯೆ, ಭರತೇಶ ಉಪಾಧ್ಯೆ, ಪ್ರದೀಪ ಉಪಾಧ್ಯೆ, ಅಪ್ಪಾಸಾಹೇಬ ಉಪಾಧ್ಯೆ, ಎ.ಸಿ. ಪಾಟೀಲ, ಅರುಣ ಯಲಗುದ್ರಿ, ಧರೆಪ್ಪ ಆಲಗೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net