

ಶಿವಮೊಗ್ಗ: ಆರ್‌ಎಸ್‌ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಬಗ್ಗೆ ಮಾತನಾಡುವ ನೈತಿಕತೆ ಆಗಲಿ, ಯೋಗ್ಯತೆ ಆಗಲಿ ನಮಗ್ಯಾರಿಗೂ ಇಲ್ಲ. ಇಡೀ ದೇಶದ ಸಂಸ್ಕೃತಿ ಉಳಿಸುವ ಕೆಲಸ ಸಂಘ ಪರಿವಾರದಿಂದ ಆಗುತ್ತಿದೆ. ಆದರೂ ಸಂಘದ ಕಾರ್ಯಚಟುವಟಿಕೆಗಳ ಟೀಕೆ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ಮತ್ತು ಕರಕುಶಲ ಕರ್ಮಿಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜಕೀಯ ಮುಖಂಡರು ಅವರವರ ಮೂಗಿನ ನೇರಕ್ಕೆ ಮಾತನಾಡುವುದು ಹೊಸದೇನಲ್ಲ ಎಂದರು.
ಆರ್‌ಎಸ್‌ಎಸ್ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುವ ಜತೆಗೆ ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಲು ಶ್ರಮಿಸುತ್ತಿದೆ. ಇದರ ಅರಿವಿಲ್ಲದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿರುಗೇಟು ನೀಡಿದರು