

ಶಿವಮೊಗ್ಗ: ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಅವರು ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರ ಮತ್ತು ಕಲುಷಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ, ನೈಋತ್ಯ ಶಿಕ್ಷಕರ ಕ್ಷೇತ್ರದ ಉಸ್ತುವಾರಿ ಎಂ.ರಮೇಶ್ ಶಂಕರಘಟ್ಟ ದೂರಿದರು.
ಶಿಕ್ಷಕರ ಕ್ಷೇತ್ರವು ಪವಿತ್ರವಾಗಿದೆ. ಆದರೆ ಹಣ, ಹೆಂಡ ಹಂಚುವ ಮೂಲಕ ಸುಶಿಕ್ಷಕರ ಕ್ಷೇತ್ರದ ಪಾವಿತ್ರತೆಯನ್ನೂ ಹಾಳು ಮಾಡಲಾಗುತ್ತಿದೆ. ಹಾಗಾಗಿ ಶಿಕ್ಷಕರು ಈ ಬಾರಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಹಾಲಿ ಎಂಎಲ್ಸಿ ಎಸ್.ಎಲ್.ಬೋಜೇಗೌಡ ಅವರನ್ನು ತಿರಸ್ಕಾರ ಮಾಡುವಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಬಿಜೆಪಿಯ ಐವರು ಅಭ್ಯರ್ಥಿಗಳನ್ನು ಸೋಲಿಸಿದ್ದೇನೆಂದು ಬೋಜೇಗೌಡ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದರು. ಇದೀಗ ಬಿಜೆಪಿಯವರು ಅವರನ್ನು ಹೇಗೆ ಬೆಂಬಲಿಸುತ್ತಾರೆ. ಗೆಲ್ಲಿಸಿಕೊಂಡು ಬರುತ್ತಾರೆ ಎಂಬುದು ಪ್ರಶ್ನೆಯಾಗಿದ್ದು. ಬೋಜೇಗೌಡರ ಯಾವುದೇ ತಂತ್ರಗಳು ಈ ಬಾರಿ ಕೆಲಸ ಮಾಡಲ್ಲ ಎಂದರು.
ಕಳೆದ 40 ವರ್ಷಗಳ ಇತಿಹಾಸದಲ್ಲಿ ಈ ಬಾರಿಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಕೊಡುಗು ಜಿಲ್ಲೆ ಹೊರತುಪಡಿಸಿ ಉಳಿದ ಐದೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಈ ಬಾರಿ ವಿಶಿಷ್ಟ ರೀತಿಯಲ್ಲಿ ಚುನಾವಣೆ ನಡೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಇಡೀ ಕ್ಷೇತ್ರದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಆರು ಜಿಲ್ಲೆಗಳ 14 ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಸೋತವರನ್ನೂ ಒಳಗೊಂಡಂತೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಪಕ್ಷ ಸೂಚನೆ ಕೊಟ್ಟಿದ್ದು ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಪರ ಯಾವುದೇ ಅಲೆ ಕಾಣುತ್ತಿಲ್ಲ. ಹಾಗಾಗಿ ಚುನಾವಣೆ ಬಳಿಕ ಸರ್ಜಿ ಅವರು ತಮ್ಮ ವೈದ್ಯ ವೃತ್ತಿಯನ್ನೇ ಮುಂದುವರಿಸುವುದು ಒಳಿತು ಎಂದು ಸಲಹೆ ನೀಡಿದರು.