

ಬೆಂಗಳೂರು: ಮಾಂಸದ ಊಟ ವಿತರಿಸುವಂತೆ ಕರೊನಾ ಸೋಂಕಿತರು ಭಾನುವಾರ ರಾತ್ರಿ ವೈದ್ಯರ ಜತೆ ಗಲಾಟೆ ನಡೆಸಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣ ಸಮೀಪ ಸರ್ಕಾರಿ ಆಯುರ್ವೇದ ಕಾಲೇಜು ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಕರೊನಾ ಸೋಂಕಿತರು ಈ ಬಗ್ಗೆ ದಾಂಧಲೆ ಮಾಡಿದ್ದಾರೆ. ರೋಗಿಗಳಿಗೆ ಎಂದಿನಂತೆಯೇ ಭಾನುವಾರ ರಾತ್ರಿ 8.30ರಲ್ಲಿ ಊಟ ವಿತರಿಸಲಾಗಿತ್ತು. ಈ ವೇಳೆ ಊಟದ ವಿಚಾರಕ್ಕೆ 130ಕ್ಕೂ ಹೆಚ್ಚು ರೋಗಿಗಳು ವೈದ್ಯರು ಮತ್ತು ಅಲ್ಲಿನ ಸಿಬ್ಬಂದಿ ಜತೆ ಗಲಾಟೆ ತೆಗೆದಿದ್ದರು. ಭಾನುವಾರದ ಹಿನ್ನೆಲೆಯಲ್ಲಿ ಮಾಂಸದ ಊಟ ಬೇಕು ಎಂದು ವಾಗ್ವಾದ ನಡೆಸಿದರು.
ವಿಷಯ ತಿಳಿದ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.