

ಲಿಂಗಸುಗೂರು: ಗದ್ದಲರ ತಾಂಡಾದಲ್ಲಿ ಮಾಂಸದೂಟ ಸೇವಿಸಿದ್ದ 15 ಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಕೆಲವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಸ್ವಸ್ಥರು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ತಾಂಡಾಕ್ಕೆ ಮರಳಿದ್ದಾರೆ.
ತಾಂಡಾದಲ್ಲಿ 20 ಮನೆಗಳಿದ್ದು 108 ಜನ ವಾಸವಾಗಿದ್ದಾರೆ. ಬುಧವಾರ ರಾತ್ರಿ ದೇವರ ಹೆಸರಿನಲ್ಲಿ ಬಾಡೂಟ ತಯಾರಿಸಲಾಗಿದ್ದು, ಊಟ ಸೇವಿಸಿದವರ ಪೈಕಿ ಮಕ್ಕಳು ಸೇರಿದಂತೆ 15 ಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಾಪಂ ಇಒ ಉಮೇಶ, ವೈದ್ಯಾಧಿಕಾರಿಗಳಾದ ಅಭಿಜಿತ್, ವಿಕ್ರಂ ಪಾಟೀಲ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ಆರೋಗ್ಯ ನಿರೀಕ್ಷಕ ರಮೇಶ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಟಿಎಚ್‌ಒ ಡಾ.ಅಮರೇಶ ಪಾಟೀಲ್, ಜಿಲ್ಲಾ ಆರೋಗ್ಯ ಸಮೀಕ್ಷಣಾಧಿಕಾರಿ ಡಾ.ಕೆ.ಗಣೇಶ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಡಾ.ವಿನೋದ ಗುರುವಾರ ಬೆಳಗ್ಗೆ ತಾಂಡಾಕ್ಕೆ ಭೇಟಿ ನೀಡಿ ಬೋರ್‌ವೆಲ್, ಪೈಪ್‌ಲೈನ್, ಕುಡಿಯುವ ನೀರಿನ ಸ್ವಚ್ಛತೆ ಪರಿಶೀಲನೆ ನಡೆಸಿ ಕ್ಲೋರಿನೇಷನ್ ಮಾಡಿಸಿದರು.