ಸೇವೆ ಮುಂದುವರೆಸುವಂತೆ ಆಗ್ರಹ: ಮಂಡ್ಯದಲ್ಲಿ ಅಧ್ಯಾಪಕೇತರ ಸಿಬ್ಬಂದಿ ಪ್ರತಿಭಟನೆ

Non-teaching staff protest mandya
Published on

ಮಂಡ್ಯ: ತಾಲೂಕಿನ ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಅಧ್ಯಾಪಕೇತರ ಸಿಬ್ಬಂದಿಯನ್ನು ಏಕಾಏಕಿ ಕೇಂದ್ರದಿಂದ ಹೊರ ಹಾಕಿರುವುದನ್ನು ವಿರೋಧಿಸಿ ಸೋಮವಾರ ಡಿಸಿ ಕಚೇರಿ ಎದುರು ಅಧ್ಯಾಪಕೇತರ ಸಿಬ್ಬಂದಿ ಪ್ರತಿಭಟಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದ ಸರ್‌ಎಂವಿ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ 16 ವರ್ಷದಿಂದ 32 ಜನ ಸಿಬ್ಬಂದಿ ಸಂಚಿತ ವೇತನದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ 2023-24ನೇ ಸಾಲಿನಿಂದ ಸ್ನಾತಕೋತ್ತರ ಕೇಂದ್ರ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದು, ಮೈಸೂರು ವಿಶ್ವವಿದ್ಯಾನಿಲಯ ತಾತ್ಕಾಲಿಕ ಅಧ್ಯಾಪಕೇತರ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮಂಡ್ಯ ವಿವಿಯಲ್ಲಿ ಮುಂದುವರೆಸುವಂತೆ ಕೋರಿರುತ್ತಾರೆ. ಆದರೆ ಮಂಡ್ಯ ವಿವಿ 2023 ಸೆಪ್ಟಂಬರ್ ಮಾಹೆಯಿಂದ ಕೇಂದ್ರವನ್ನು ಹಸ್ತಾಂತರ ಮಾಡಿಕೊಂಡಿರುವುದಿಲ್ಲ. ಜತೆಗೆ ಜ.29ರಂದು ತಾತ್ಕಾಲಿಕ ಅಧ್ಯಾಪಕೇತರ ವರ್ಗದವರ ಅವಶ್ಯಕತೆ ಇರುವುದಿಲ್ಲ ಎಂದು 32 ಸಿಬ್ಬಂದಿಯನ್ನು ಕೇಂದ್ರದಿಂದ ಹೊರಹಾಕಿ ಬೀಗ ಹಾಕಿದ್ದಾರೆಂದು ಆರೋಪಿಸಿದರು.

ವಿಶ್ವವಿದ್ಯಾನಿಲಯದ ಕೆಲಸ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ವೇತನ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದೇವೆ. ಸರ್ಕಾರ ಮತ್ತು ಮೈಸೂರು ಮಂಡ್ಯ ವಿಶ್ವವಿದ್ಯಾನಿಲಯಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಆದ್ದರಿಂದ ಅಧ್ಯಾಪಕೇತರ ಸಿಬ್ಬಂದಿ ಸೇವೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಪಾಲ್ಗೊಂಡರು. ಎಸ್.ಎಂ.ಶಶಿಧರ, ಮಂಚೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net