

ಡಿ.ವಿ. ಕಮ್ಮಾರ, ಧಾರವಾಡ
ಯಾವುದೇ ಪ್ರದೇಶದಲ್ಲಿರುವ ಜಮೀನು, ಇಲ್ಲವೆ ಜಮೀನನಲ್ಲಿರುವ ಆಸ್ತಿಗೆ ಸಂಬಂಧಿಸಿದ ಕರವನ್ನು ಮಾಲೀಕರು ಪ್ರತಿ ವರ್ಷ ಆಯಾ ಸ್ಥಳೀಯ ಸಂಸ್ಥೆಗಳಿಗೆ ಭರಿಸಲೇಬೇಕು. ಆದರೆ, ಧಾರವಾಡ ಹೊರವಲಯದ ಬೇಲೂರು ಮತ್ತು ಮುಮ್ಮಿಗಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಕಳೆದ ಐದಾರು ವರ್ಷಗಳಿಂದ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಆಸ್ತಿಕರ ಪಾವತಿಸಿಲ್ಲ. ಸದ್ಯ ತಮಗೆ ಬರಬೇಕಿರುವ ಕರ ಬಾರದಿರುವ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಂಚಾಯಿತಿಗಳು ಈಗ ಸರ್ಕಾರದ ಮೊರೆ ಹೋಗುವುದಕ್ಕೆ ಮುಂದಾಗಿವೆ.
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಮತ್ತು ಬೇಲೂರು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 2035 ಎಕರೆ ಭೂಮಿಯನ್ನು 450ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ನೀಡಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಈ ಭೂಮಿಗಳನ್ನು ರೈತರಿಂದ ಸ್ವಾಧೀನಪಡಿಸಿಕೊಂಡು ಹಂತ ಹಂತವಾಗಿ ಕೈಗಾರಿಕೆಗಳಿಗೆ ನೀಡುತ್ತ ಬಂದಿದೆ. ಕಳೆದ 30 ವರ್ಷಗಳ ಅವಧಿಯಲ್ಲಿ ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿನ ಬಹುತೇಕ ಎಲ್ಲ ಜಮೀನು ಕೈಗಾರಿಕೆಗಳ ಪಾಲಾಗಿದೆ.
ಈ ಎರಡೂ ಗ್ರಾಪಂಗಳು ಮೊದಲಿನಿಂದ ಆಸ್ತಿಕರ ವಸೂಲಿ ಮಾಡುತ್ತ ಬಂದಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಪಂ ಆಸ್ತಿಕರ ಪದ್ಧತಿಯಲ್ಲಿ ತಿದ್ದುಪಡಿಯಾದ ಬಳಿಕ ಕೈಗಾರಿಕೆಗಳು ಆಸ್ತಿಕರ ತುಂಬುವುದನ್ನು ನಿಲ್ಲಿಸಿಬಿಟ್ಟಿವೆ. ಈ ಬಗ್ಗೆ ಕೈಗಾರಿಕೆಗಳಿಗೆ ಮುಮ್ಮಿಗಟ್ಟಿ ಗ್ರಾಪಂದವರು ನೋಟಿಸ್ಗಳನ್ನು ನೀಡುತ್ತ ಬಂದಿದ್ದಾರೆ. ಆದರೂ ಸ್ಪಂದಿಸುತ್ತಿಲ್ಲವಂತೆ. ಹೀಗಾಗಿ ತಮ್ಮ ಅಧೀನದ ಕೈಗಾರಿಕೆಗಳಿಂದ ಕರ ವಸೂಲಿ ಮಾಡಿಸಿಕೊಡಿ ಎಂದು ಕೆಐಎಡಿಬಿಗೂ ಕೋರಿದ್ದಾರೆ. ಈ ಕೋರಿಕೆ ಮೇರೆಗೆ ಕೆಐಎಡಿಬಿ, ಕೈಗಾರಿಕೆಗಳ ಸಂಘದವರಿಗೆ ಪತ್ರ ಬರೆದು ಕರ ತುಂಬುವಂತೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.
ಆದಾಯಕ್ಕೆ ಹೊಡೆತ: ಗ್ರಾಪಂಗಳು ಸ್ಥಳೀಯವಾಗಿ ನೇಮಿಸಿಕೊಳ್ಳುವ ಸಿಬ್ಬಂದಿಯ ಸಂಬಳ, ಕಚೇರಿ ನಿರ್ವಹಣೆಯ ವೆಚ್ಚವನ್ನು ಆಸ್ತಿಕರದಿಂದ ಬರುವ ಸಂಪನ್ಮೂಲದಿಂದಲೇ ನಿಭಾಯಿಸಬೇಕು. ಆದರೆ, ಮುಮ್ಮಿಗಟ್ಟಿ ಮತ್ತು ಬೇಲೂರು ಗ್ರಾಪಂನಲ್ಲಿ ಬಹುತೇಕ ಎಲ್ಲ ಜಮೀನುಗಳು ಕೈಗಾರಿಕೆಗಳ ಪಾಲಾಗಿರುವುದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ಇಲ್ಲಿ ಕೈಗಾರಿಕೆಗಳಿಗೆ ಜಮೀನು ನೀಡಿರುವುದು ಕೆಐಎಡಿಬಿ. ಕೈಗಾರಿಕೋದ್ಯಮಿಗಳ ವ್ಯವಹಾರ ಏನಿದ್ದರೂ ಅದು ಕೆಐಎಡಿಬಿ ಜತೆಗೆ ಇದೆ. ಕೆಲ ದೊಡ್ಡ ಕೈಗಾರಿಕೆಗಳು ಸರ್ಕಾರದ ಮಟ್ಟದಲ್ಲಿ ಒಡಂಬಡಿಕೆ ಮಾಡಿಕೊಂಡು ಬಂದಿವೆ. ಅವರು, ಗ್ರಾಪಂನವರು ಕೊಡುತ್ತಿರುವ ನೋಟಿಸ್ಗಳು ಸಂಬಂಧ ಇಲ್ಲ, ನಾವು ನೇರವಾಗಿ ಸರ್ಕಾರದ ಜತೆ ವ್ಯವಹರಿಸುತ್ತೇವೆ ಎಂದು ಹೇಳುತ್ತಿದ್ದಾರಂತೆ. ಇನ್ನು ಕೈಗಾರಿಕೋದ್ಯಮಿಗಳ ಕಡೆಯಿಂದಲೂ ಅನೇಕ ಬೇಡಿಕೆಗಳಿವೆ. ನಾವು ಗ್ರಾಪಂಗೆ ತೆರಿಗೆ ಕೊಟ್ಟರೂ ಮೂಲಸೌಕರ್ಯಗಳು ಸಿಗುತ್ತಿಲ್ಲ. ತೆರಿಗೆ ಗ್ರಾಪಂಗೆ ಕಟ್ಟಿ, ಬೇಡಿಕೆಗಳಿಗಾಗಿ ಸರ್ಕಾರವನ್ನೇ ಕೇಳಬೇಕಾಗಿದೆ. ಹೀಗಾಗಿ ನಾವು ಸ್ಥಳೀಯವಾಗಿ ತೆರಿಗೆ ಕಟ್ಟುವುದರಿಂದ ಪ್ರಯೋಜನವೇನು? ಎಂಬುದು ಕೈಗಾರಿಕೋದ್ಯಮಿಗಳ ವಾದ. ಈ ಬೇಡಿಕೆಗಳ ಬಗ್ಗೆ ಈಗಾಗಲೇ ಕೈಗಾರಿಕೋದ್ಯಮಿಗಳು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗಮನಕ್ಕೂ ತಂದಿದ್ದಾರೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಪರಿಷ್ಕೃತ ತೆರಿಗೆ ಪದ್ಧತಿ ಬಳಿಕ ಯಾರೊಬ್ಬರೂ ಕರ ತುಂಬಲು ಮುಂದೆ ಬರುತ್ತಿಲ್ಲ. ನೋಟಿಸ್ ಕೊಟ್ಟರೂ ಪ್ರತಿಕ್ರಿಯಿಸುತ್ತಿಲ್ಲ. ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ಸರ್ಕಾರವೇ ಒಂದು ನಿಯಮ ಮಾಡಿ ಅನುಕೂಲ ಮಾಡಿಕೊಡಬೇಕು. | ವಿಠ್ಠಲ ಭಟ್ಟಂಗಿ ಅಧ್ಯಕ್ಷ, ಮುಮ್ಮಿಗಟ್ಟಿ ಗ್ರಾಮ ಪಂಚಾಯಿತಿ
ನಮ್ಮ ಕೈಗಾರಿಕೆಗಳಿರುವ ಜಮೀನಿನ ಮಾಲೀಕತ್ವ ಇನ್ನೂ ಕೆಐಎಡಿಬಿ ಹೆಸರಿನಲ್ಲಿದೆ. ನಮಗೆ ಕೊಟ್ಟಿರುವ ಜಮೀನುಗಳ ಎನ್ಎ ಮಾತ್ರ ಆಗಿದ್ದು. ಪಹಣಿ ಪತ್ರದಲ್ಲಿ ನಮ್ಮ ಹೆಸರು ಸೇರಿಲ್ಲ. ನಮ್ಮ ಹೆಸರಿನಲ್ಲಿ ಮಾಲೀಕತ್ವ ಆದಾಗ ಮಾತ್ರ ನಾವು ತೆರಿಗೆ ತುಂಬಬಹುದು. ಮೊದಲು ನಮಗೆ ಸರ್ಕಾರ ಪಹಣಿ ಪತ್ರದಲ್ಲಿ ಮಾಲೀಕತ್ವ ಹೆಸರು ಸೇರಿಸಲಿ. ಆ ಬಳಿಕ ನಾವು ಕರ ತುಂಬುತ್ತೇವೆ. | ಶ್ರೀಧರ ಶೇಟ್ ಜಂಟಿ ಕಾಯದರ್ಶಿ, ಕೈಗಾರಿಕಾ ಬೆಳವಣಿಗೆಗಳ ಉದ್ಯಮಿಗಳ ಸಂಘ
ಈಗಾಗಲೇ ಕೈಗಾರಿಕೋದ್ಯಮಿಗಳು ಹಾಗೂ ಗ್ರಾಪಂ ಇಬ್ಬರ ಕಡೆಯ ವಾದ ಆಲಿಸಿದ್ದೇವೆ. ಅವರದ್ದೇ ಆದ ಸಮಸ್ಯೆಗಳನ್ನು ಎರಡೂ ಕಡೆಯವರು ಹೇಳುತ್ತಿದ್ದಾರೆ. ಈಗ ಜಿಪಂ ಸಿಇಒ ಗಮನಕ್ಕೆ ತಂದು ಕೈಗಾರಿಕೋದ್ಯಮಿಗಳು, ಗ್ರಾಪಂ, ಕೆಐಎಡಿಬಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳನ್ನು ಸೇರಿಸಿ ಜಂಟಿ ಸಭೆ ನಡೆಸಿ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತೇವೆ. | ಗುರುದತ್ತ ಹೆಗಡೆ ಜಿಲ್ಲಾಧಿಕಾರಿ