

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪಟ್ಟಣದ ಒಳಚರಂಡಿ ಮತ್ತು ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಸೂಕ್ತ ಜಮೀನು ಅಂತಿಮಗೊಳಿಸುವ ಸಲುವಾಗಿ ಬುಧವಾರ ಕರೆದ ಪುರಸಭೆ ವಿಶೇಷ ಸಭೆ ತಾರ್ಕಿಕ ಅಂತ್ಯ ಕಾಣದೆ ಮುಂದೂಡಲ್ಪಟ್ಟಿತು.
ಮುಖ್ಯಾಧಿಕಾರಿ ನಾಗರಾಜ್ ಸಿ. ವಿಷಯ ಪ್ರಸ್ತಾಪಿಸಿ, ಕಾಪು ಪೇಟೆಗೆ ಮಾತ್ರ ಸೀಮಿತವಾಗುವಂತೆ ಒಳಚರಂಡಿ ಯೋಜನೆಯ ವಿಸ್ತ್ರತ ವರದಿ ಸಿದ್ಧಪಡಿಸಿ, ಕಾಮಗಾರಿಗೆ ಟೆಂಡರ್ ಆಗಿತ್ತು. 900 ಮೀ. ಪೈಪ್‌ಲೈನ್ ಕಾಮಗಾರಿಯೂ ನಡೆದಿದ್ದು, ಎಸ್‌ಟಿಪಿಗೆ ಸೂಕ್ತ ಜಾಗ ಸಿಗದ ಕಾರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಪ್ರಸ್ತುತ ಕಾಪು ಪುರಸಭೆ ವ್ಯಾಪ್ತಿಯ ಸಮಗ್ರ ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಾಣಕ್ಕೆ ಕೆಯುಡಿಎಫ್‌ಸಿಗೆ ಅನುಮೋದನೆ ದೊರಕಿದೆ ಎಂದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳಾದ ರಕ್ಷಿತ್, ಅಜಯ್ ಪ್ರತಿಕ್ರಿಯಿಸಿ, ಒಳಚರಂಡಿ ಸಮಸ್ಯೆ, ಕೊಳಚೆ ನೀರು ನಿರ್ವಹಣೆ ಮತ್ತು ಎಸ್‌ಟಿಪಿ / ಎಫ್‌ಎಸ್‌ಟಿಪಿ ಘಟಕಗಳ ನಿರ್ಮಾಣಕ್ಕೆ 8.52 ಕೋಟಿ ರೂ. ಅನುದಾನ ಲಭ್ಯವಿದೆ. ಜಾಗದ ಸರ್ವೇ ನಡೆಸಿ ವ್ಯವಸ್ಥೆ ಮಾಡಿಕೊಟ್ಟರೆ ಯೋಜನೆ ಅನುಷ್ಠಾನಕ್ಕೆ ಸಿದ್ಧ ಎಂದು ಭರವಸೆ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪನೆ ತುರ್ತಾಗಿ ಆಗಲೇಬೇಕಿದೆ. ಕನಿಷ್ಠ ಎರಡು ಎಕರೆ ಜಾಗದ ಅಗತ್ಯವಿದೆ. ಈ ಸಮಸ್ಯೆ ಬಗೆಹರಿಸಲು ನಾವು ಪಕ್ಷಾತೀತವಾಗಿ ಪ್ರಯತ್ನಿಸೋಣ ಎಂದರು.
ರಾಜ್ಯದ ವಿವಿಧೆಡೆಗಳಲ್ಲಿ ಎಫ್‌ಎಸ್‌ಟಿಪಿ, ಎಸ್‌ಟಿಪಿ ಘಟಕಗಳು ಇಲ್ಲದಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ರಾಜ್ಯ ಸರ್ಕಾರಕ್ಕೆ ಈಗಾಗಲೇ 3,500 ಕೋಟಿ ರೂ. ದಂಡ ವಿಧಿಸಿದೆ. ಅವರ ನಿರ್ದೇಶನಗಳು ಪಾಲನೆಯಾಗದಿದ್ದರೆ ಕಾಪು ಪುರಸಭೆಯೂ ಇದೇ ಮಾದರಿ ದಂಡ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದರು.
ತಹಸೀಲ್ದಾರ್ ಪ್ರತಿಭಾ ಆರ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಪುರಸಭೆ ಸಿಬಂದಿ ಮಾಲತಿ ನಿರೂಪಿಸಿದರು.
ಕಾಪು ಪುರಸಭೆಯಲ್ಲಿ ಮೂಲಸೌಕರ್ಯಗಳ ಜೋಡಣೆಗೆ ಸರ್ಕಾರಿ ಜಾಗದ ಕೊರತೆಯಿದೆ. ಮತ್ತೊಂದು ಸಾರ್ವಜನಿಕ ಶೌಚಗೃಹದ ನಿರ್ಮಾಣಕ್ಕೆ ಅನುದಾನ ಲಭ್ಯವಿದೆ. ಪುರಸಭೆ ಆವರಣದ ಬಳಿ ಜಾಗವಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಪುರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳ ವಿವರ ಸಂಗ್ರಹಿಸುವಂತೆ ಸಲಹೆ ನೀಡಿದರು. ಈ ಕುರಿತು ಮುಖ್ಯಾಧಿಕಾರಿ ನಾಗರಾಜ್ ಕೂಡ ತಹಸೀಲ್ದಾರ್ ಪ್ರತಿಭಾ ಆರ್. ಬಳಿ ವಿನಂತಿಸಿದರು.
ಕುರ್ಕಾಲು ಬಳಿ ಹರಿಯುವ ಪಾಪನಾಶಿನಿ ಹೊಳೆಯಿಂದ ಕಾಪು ಪುರಸಭೆಗೆ ನೀರು ಹರಿಸುವ ಘಟಕ ಉದ್ಘಾಟನೆಗೆ ಕುರ್ಕಾಲು ಗ್ರಾಪಂನಿಂದ ವಿರೋಧ ವ್ಯಕ್ತವಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಯೋಜನೆಯ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ 26 ಕೋ. ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರಕಿದಲ್ಲಿ 9 ತಿಂಗಳ ಒಳಗೆ ನೀರು ಸರಬರಾಜು ಮಾಡಲಾಗುವುದು ಎಂದು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದರು.