ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ

5Rayabag1
Published on

ರಾಯಬಾಗ: ಸಹಕಾರ ಚುನಾವಣೆಯಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ರೈತರ ಅನುಕೂಲಕ್ಕಾಗಿ ಎಲ್ಲರೂ ಒಟ್ಟುಗೂಡಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಪಿಕೆಪಿಎಸ್ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆ ಉದ್ಘಾಟಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಇನ್ನು ಹೆಚ್ಚಿನ ಸಾಲ ಸೌಲಭ್ಯ ನೀಡಿ, ಹೈನುಗಾರಿಕೆ ಪ್ರೋತ್ಸಾಹಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬ್ಯಾಂಕ್‌ನಲ್ಲಿ ಕೇವಲ ಅಧ್ಯಕ್ಷರಷ್ಟೇ ಅಲ್ಲದೇ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಅಭಿಪ್ರಾಯ ಮುಖ್ಯ. ಮುಂಬರುವ ದಿನಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಹೆಚ್ಚು ಸಾಲ ನೀಡಲಾಗುವುದು.

ಅಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಡಿಸಿಸಿ ಬ್ಯಾಂಕ್ ಮುನ್ನಡೆಸುತ್ತಿರುವ ಅಪ್ಪಾಸಾಹೇಬ ಕುಲಗುಡೆ ಅವರನ್ನು ಮತ್ತೊಮ್ಮೆ ಅವಿರೋಧ ಆಯ್ಕೆಮಾಡಬೇಕೆಂದು ಕರೆ ನೀಡಿದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕ್ ಬಲಿಷ್ಠವಾಗಿ ಕಟ್ಟಲು ನಮ್ಮ ಪೆನಲ್‌ನ ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಮಾತನಾಡಿ, ಸತತ 4 ಬಾರಿ ನನ್ನನ್ನು ಆಯ್ಕೆ ಮಾಡಿದ್ದಿರಿ. ಈ ಬಾರಿ ಮತ್ತೊಮ್ಮೆ ಆಯ್ಕೆ ಮಾಡಿ, ರೈತರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.

ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ಬ್ಯಾಂಕ್ ನಿರ್ದೇಶಕರಾದ ರಾಜೇಂದ್ರ ಅಂಕಲಗಿ, ಶ್ರೀಕಾಂತ ಢವಣ, ಶಂಕರಗೌಡ ಪಾಟೀಲ, ಸಂಜೀವಕುಮಾರ ಬಾನೆಸರಕಾರ, ಅರ್ಜುನ ನಾಯಿಕವಾಡಿ, ಪಾರಿಸ್ ಉಗಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net