16ಕ್ಕೆ ಕಾಗೋಡು ತಿಮ್ಮಪ್ಪಗೆ ಪಕ್ಷಾತೀತ ಅಭಿನಂದನೆ

rks
ಸುದ್ದಿಗೋಷ್ಠಿಯಲ್ಲಿ ಆರ್.ಕೆ.ಸಿದ್ದರಾಮಣ್ಣ ಮಾತನಾಡಿದರು. ತೀ.ನ.ಶ್ರೀನಿವಾಸ, ವಿ.ರಾಜು, ಪಿ.ಆರ್.ಗಿರಿಯಪ್ಪ, ಪಿ.ಪುಟ್ಟಯ್ಯ, ಆರ್.ಟಿ.ನಟರಾಜ್ ಮುಂತಾದವರಿದ್ದರು.
Published on

ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪಈ ಬಾರಿಯ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಸೆ.16ರ ಬೆಳಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರನ್ನು ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಅಭಿನಂದಿಸಲು ತೀರ್ಮಾನಿಸಲಾಗಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಆರ್.ಕೆ.ಸಿದ್ದರಾಮಣ್ಣ, ಕಾಗೋಡು ತಿಮ್ಮಪ್ಪಈ ನಾಡು ಕಂಡ ಅಪರೂಪದ ವ್ಯಕ್ತಿ. ಶೋಷಿತರ ಪರವಾಗಿ ಹೋರಾಡಿದವರು. ಗೇಣಿದಾರರ ಪರವಾಗಿ, ಬಗರ್‌ಹುಕುಂ ರೈತರ ಪರವಾಗಿ, ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿದವರು. ಅವರಿಗೆ ದೇವರಾಜ ಅರಸು ಪ್ರಶಸ್ತಿ ನೀಡಿದ್ದರಿಂದ ಪ್ರಶಸ್ತಿಯ ಗೌರವ ಹೆಚ್ಚಿದೆ ಎಂದರು.
ಸೆ.16ರ ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಡಿ.ನಾರಾಯಣಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ವಿ.ರಾಜು ಮಾತನಾಡಿ, ಕಾಗೋಡು ತಿಮ್ಮಪ್ಪ ವಿವಿಧ ಇಲಾಖೆಯ ಸಚಿವರಾಗಿ ಅನುಭವ ಹೊಂದಿದ್ದಾರೆ. ಅದರಲ್ಲೂ ವಿಧಾನಸಭಾ ಅಧ್ಯಕ್ಷರಾಗಿ ನಾಡು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇತಿಹಾಸ ಕಂಡ ಅಪರೂಪದ ಸ್ಪೀಕರ್ ಎಂದು ಖ್ಯಾತಿ ಗಳಿಸಿದ್ದಾರೆ ಎಂದು ಹೇಳಿದರು.
ಮತ್ತೋರ್ವ ಉಪಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಭೂಮಾಲೀಕರ ವಿರುದ್ಧ ಹೋರಾಟ ಮಾಡಿದ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯ ಯಶಸ್ಸಿಗೆ ಕಾರಣರಾದವರು. ಅವರನ್ನು ಅಭಿನಂದಿಸಿ ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರ ಪರ ಹೋರಾಟಕ್ಕೆ ಹೊಸ ಶಕ್ತಿ ತುಂಬಬೇಕಿದೆ ಎಂದರು.
ಉಪಾಧ್ಯಕ್ಷರಾದ ಪಿ.ಪುಟ್ಟಯ್ಯ, ಪ್ರೊ.ಎಚ್.ರಾಚಪ್ಪ, ಪಿ.ಆರ್.ಗಿರಿಯಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಟಿ.ನಟರಾಜ್, ಖಜಾಂಚಿ ಎಸ್.ಬಿ.ಅಶೋಕ್‌ಕುಮಾರ್, ಪ್ರಮುಖರಾದ ಉಮೇಶ್, ಲೋಕೇಶ್, ಸುಮಿತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net