

ಅಥಣಿ: ಬಿಡಿಸಿಸಿ ಬ್ಯಾಂಕ್ ಯಾವುದೇ ಪಕ್ಷಕ್ಕೆ ಸಂಬಂಧವಿಲ್ಲ. ಅದು ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯಲಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಲಿಂಗಾಯತ ಮುಖಂಡರು ಪ್ರತ್ಯೇಕ ಗುಪ್ತಸಭೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಮತ್ತೊಂದು ತಂಡ ಕೂಡ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಭೆಗಳು ಸಾಮಾನ್ಯ ಎಂದರು.
ಸುಪ್ರೀಂ ಕೋರ್ಟ್ ಇಡಿ ದಾಳಿಯ ಕುರಿತು ತನ್ನದೆಯಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಡಾ ಹಗರಣದ ಕುರಿತು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಇಡಿ ನಡೆಸುತ್ತಿರುವ ದಾಳಿಗಳೆಲ್ಲವೂ ರಾಜಕೀಯ ಪ್ರೇರಿತ. ಶೀಘ್ರದಲ್ಲೇ ಬೆಳಗಾವಿ ಜಿಲ್ಲೆ ವಿಭಜನೆಗೆ ನಿರ್ಣಯ ಕೈಗೊಳ್ಳಲಾಗುವುದು. ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿ ಆರೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಶೀಲನೆ ಮಾಡಲಾಗುವುದು ಎಂದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮುಖಂಡರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ, ದಿಗ್ವಿಜಯ ಪವಾರದೇಸಾಯಿ, ರಾವಸಾಹೇಬ ಐಹೊಳೆ, ಸಿದ್ದಾರ್ಥ ಸಿಂಗೆ, ಶ್ಯಾಮರಾವ ಪೂಜಾರಿ, ಬಸವರಾಜ ಬುಟಾಳೆ, ಸುನೀಲ ಸಂಕ, ರಮೇಶ ಸಿಂದಗಿ, ಸಂಜೀವ ಕಾಂಬಳೆ ಇತರರಿದ್ದರು. ಈಚೆಗೆ ನಿಧನರಾದ ಹಿರಿಯ ಪತ್ರಕರ್ತ ಚನ್ನಯ್ಯ ಇಟ್ನಾಳಮಠ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.