

ಸಿಂಧನೂರು: ತಾಲೂಕು ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡ ನಾಲೆ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಯದ ಕಾರಣ, ರೈತರು ಭತ್ತ ನಾಟಿಗೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜಮೀನಿಗೆ ನೀರು ಹರಿಸಿಕೊಳ್ಳಲು ಕಾಲುವೆ ಮೇಲೆಯೇ ಬಿಡಾರ ಹಾಕುವಂತಾಗಿದೆ.
ತುಂಗಭದ್ರಾ ಎಡದಂಡೆ ನಾಲೆಗೆ ಒಂದು ವಾರದಿಂದ ನೀರು ಹರಿಸಲಾಗುತ್ತಿದೆ. ಎಡದಂಡೆ ನಾಲೆ ವ್ಯಾಪ್ತಿಯ 36, 40, 45, 46, 52, 55 ಹಾಗೂ 56 ನೇ ಉಪಕಾಲುವೆ ವ್ಯಾಪ್ತಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಕಾಲುವೆ ವ್ಯಾಪ್ತಿಯಲ್ಲಿ ಮೇಲ್ಭಾಗದಲ್ಲಿ ಯಥೇಚ್ಛ ನೀರು ಬಳಸಲಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ.
ಕಳೆದ ಐದಾರು ವರ್ಷಗಳಿಂದ ಈ ಕುರಿತ ಸಮಸ್ಯೆ ಹೆಚ್ಚಿದೆ. ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟಾಗ ನಾಲೆ ಮೇಲ್ಭಾಗದ ರೈತರು ಹೆಚ್ಚು ನೀರನ್ನು ಬಳಸಿಕೊಂಡು ಭತ್ತ ನಾಟಿ ಮಾಡಿಕೊಳ್ಳುತ್ತಿದ್ದಾರೆ. ಕಾಲುವೆಗಳ ಕೊನೆಯ ಭಾಗದ ಕೃಷಿ ಜಮೀನಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಉಪಕಾಲುವೆಗಳೆಲ್ಲ ಹಾಳಾಗಿರುವುದು ಕೂಡ ನೀರು ಸಮರ್ಪಕವಾಗಿ ಸಿಗದಿರುವುದಕ್ಕೆ ಕಾರಣವಾಗಿದೆ.
ನಾಲೆಗೆ ನೀರು ಹರಿಸಿ ಒಂದು ವಾರ ಕಳೆದಿದ್ದರೂ ಕೊನೆಯ ಭಾಗಕ್ಕೆ ಹನಿ ನೀರು ಹರಿದಿಲ್ಲ. ಆದರೆ, ನಾಲೆ ಮೇಲ್ಭಾಗದಲ್ಲಿ ಈಗಾಗಲೇ ಭತ್ತ ನಾಟಿ ಚುರುಕಿನಿಂದ ಸಾಗಿದೆ. ಕೊನೆಯ ಭಾಗದಲ್ಲಿ ನೀರಿನ ಕೊರತೆಯಿಂದ ರೈತರು ಆತಂಕದ ಸ್ಥಿತಿ ಎದುರಿಸುವಂತಾಗಿದೆ.
ರೈತರು ಕಾಲುವೆಗಳಲ್ಲಿ ಕುಳಿತು ಪ್ರತಿಭಟನೆ ಮಾಡಿದರೂ, ಉಪಯೋಗವಿಲ್ಲದಂತಾಗಿದೆ. ಮುಖ್ಯ ನಾಲೆಯಿಂದ ಉಪಕಾಲುವೆಗೆ ಸಮರ್ಪಕ ಪ್ರಮಾಣದಲ್ಲಿಯೇ ನೀರು ಹರಿಯುತ್ತಿದೆ. ಆದರೆ, ನಾಲೆಯ ಕೊನೆಯ ಭಾಗದಲ್ಲಿ ಮಾತ್ರ ನೀರಿಲ್ಲ. ಅದರಲ್ಲೂ 36, 40 ಹಾಗೂ 56 ನೇ ಉಪಕಾಲುವೆಗಳ ಕೊನೆಯ ಭಾಗಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: 40 ನೇ ಉಪಕಾಲುವೆಗೆ ನೀರು ಹರಿಸಿ
ನಾಲೆ ಮೇಲ್ಭಾಗದಲ್ಲಿ ಭತ್ತ ನಾಟಿ ಮುಗಿದ ನಂತರ ಇಲ್ಲವೇ ಮಳೆ ಬಂದಾಗ ನೀರು ಲಭ್ಯವಾಗಲಿದೆ. ಒಂದು ತಿಂಗಳು ತಡವಾಗಿ ಭತ್ತ ನಾಟಿ ಮಾಡುವುದರಿಂದ ಬೆಳೆಯೂ ಸಮರ್ಪಕವಾಗಿ ಬರುತ್ತಿಲ್ಲ. ಈ ಸಮಸ್ಯೆಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ.
ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿನ ತುಂಗಭದ್ರಾ ಉಪಕಾಲುವೆಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿದೆ. ನಾಲೆ ಮೇಲ್ಭಾಗದಲ್ಲಿ ಅಲ್ಲಲ್ಲಿ ಕಾಲುವೆ ಹಾಳಾಗಿರುವುದರಿಂದ ನೀರು ಪೋಲಾಗುತ್ತಿದೆ. ಈ ಕುರಿತು ಕ್ರಮಕೈಗೊಳ್ಳಲಾಗುತ್ತಿದೆ. ಕಾಲುವೆಗಳ ದುರಸ್ತಿಗೆ ಅನುದಾನ ಇಲ್ಲ.ಹನುಮಂತಪ್ಪ,ನೀರಾವರಿ ಇಲಾಖೆ ಎಇಇ, ತುರ್ವಿಹಾಳ ಉಪವಿಭಾಗ ತುಂಗಭದ್ರಾ ಎಡದಂಡೆ ಉಪಕಾಲುವೆಗಳ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ನಾಲೆ ಮೇಲ್ಭಾಗಕ್ಕೆ ಸಿಕ್ಕಷ್ಟು ಆದ್ಯತೆ ಕೊನೆಯ ಭಾಗಕ್ಕೆ ಇಲ್ಲ.ಬಸವಂತರಾಯಗೌಡ ಕಲ್ಲೂರು, ಪ್ರಾಂತ ರೈತ ಸಂಘ ತಾಲೂಕು ಸಂಚಾಲಕ, ಸಿಂಧನೂರು