ಸ್ವಚ್ಛತೆಗೆ ಅಸಹಕಾರ : ಮೈಸೂರಿನಲ್ಲಿ 2 ತಿಂಗಳಿನಲ್ಲಿ 2 ಲಕ್ಷ ರೂ. ದಂಡ

mcc
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಸ್ವಚ್ಛ ನಗರಿಯಾಗಿ ರೂಪಿಸಲು ಸಹಕರಿಸದ ಜನರಿಗೆ ಪಾಲಿಕೆಯು ದಂಡದ ಮೂಲಕ ಬಿಸಿ ಮುಟ್ಟಿ ಸಲು ಪ್ರಾರಂಭಿವಿಸಿದ್ದು, ಎರಡು ತಿಂಗಳ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವರ್ತಕರಿಗೆ 2 ಲಕ್ಷ ರೂ. ದಂಡ ವಿಧಿಸಿದೆ.

ಸ್ವಚ್ಛತೆ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ನಗರದಲ್ಲಿ ಕೆಲವರು ಸ್ವಚ್ಛತೆಗೆ ಸಹಕಾರ ನೀಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ವಾರ್ಡ್‌ವಾರು ಮಾಡಲಾಗಿದೆ. ಅಲ್ಲದೆ, ಇತ್ತೀಚೆಗೆ ಪ್ರತಿಯೊಂದು ಶಾಲೆಗಳಿಗೆ ತೆರಳಿ ಶಾಲಾ ಮಕ್ಕಳ ಮೂಲಕ ಸಹ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಇಷ್ಟೆಲ್ಲ ಪ್ರಯತ್ನದ ನಡುವೆಯೂ ಕೆಲವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು, ಪ್ಲಾಸ್ಟಿಕ್ ಬಳಕೆ ಮಾಡುವ ಮೂಲಕ ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರ್ಯ ಮಾಡುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುವ ಮೂಲಕ ನಗರದ ನೈರ್ಮಲ್ಯ ಕಾಪಾಡುವ ಪ್ರಯತ್ನ ನಡೆಸುತ್ತಿದೆ.

ಯಾವುದಕ್ಕೆ ಎಷ್ಟು ದಂಡ?: ಜನರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಗಮನಿಸಿದ ನಗರ ಪಾಲಿಕೆಯು ಒಟ್ಟು 36,000 ರೂ. ದಂಡ ವಿಧಿಸಿದೆ. ಪ್ರತಿನಿತ್ಯ ಪೌರ ಕಾರ್ಮಿಕರು ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿದ್ದು, ಪೌರ ಕಾರ್ಮಿಕರಿಗೆ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡಬೇಕು. ಆದರೆ, ತ್ಯಾಜ್ಯ ಬೇರ್ಪಡಿಸದೆ ಎಲ್ಲ ತ್ಯಾಜ್ಯವನ್ನು ಒಟ್ಟಿಗೆ ನೀಡುತ್ತಿದ್ದ ಜನರಿಗೆ ಒಟ್ಟು 5,800 ರೂ. ದಂಡ ವಿಧಿಸಲಾಗಿದೆ. ಅದೇ ರೀತಿ ವಾಣಿಜ್ಯ ಮಳಿಗೆಯವರು ತ್ಯಾಜ್ಯವನ್ನು ವಿಂಗಡಣೆ ಮಾಡಿ ನೀಡದ ಹಿನ್ನೆಲೆಯಲ್ಲಿ 6,000 ರೂ. ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ.

ಮಲಿನ ನೀರು ಹಾಗೂ ಇನ್ನಿತರೆ ದ್ರವ್ಯ ತ್ಯಾಜ್ಯವನ್ನು ರಸ್ತೆಗಳಿಗೆ ಹರಿಯಬಿಟ್ಟವರಿಗೆ ಒಟ್ಟು 3,500 ರೂ. ದಂಡ, ಪ್ರಾಣಿತ್ಯಾಜ್ಯವನ್ನು ನಿಗದಿ ಸ್ಥಳದಲ್ಲಿ ವಿಲೇವಾರಿ ಮಾಡಿದವರಿಗೆ 1,000 ರೂ. ದಂಡ, ತೆರೆದ ಚರಂಡಿಗಳಲ್ಲಿ ತ್ಯಾಜ್ಯ ಎಸೆಯದವರಿಗೆ 2,000 ರೂ. ದಂಡ, ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಲೆಗಳನ್ನು ಸುಡುತ್ತಿದ್ದವರನ್ನು ಗುರುತಿಸಿ 2,000 ರೂ. ದಂಡ, ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಸಾರ್ವಜನಿಕರಿಗೆ 140 ರೂ., ಬೀದಿ ಬದಿ ವ್ಯಾಪಾರಿಗಳಿಗೆ 3,150 ರೂ., ವರ್ತಕರಿಗೆ 60,000 ರೂ., ಭಾರಿ ಪ್ರಮಾಣದಲ್ಲಿ ಮಾರಾಟ ಮತ್ತು ವಿತರಣೆ ಮಾಡುತ್ತಿದ್ದವರಿಗೆ 50,000 ರೂ. ದಂಡ ವಿಧಿಸಲಾಗಿದೆ.

ಕಡಿವಾಣ ಅಗತ್ಯ: ನಗರದ ಹಲವಾರು ರಸ್ತೆಗಳಲ್ಲಿ ತ್ಯಾಜ್ಯವನ್ನು ಜನರು ಎಸೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಂತಹ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ನಗರ ಪಾಲಿಕೆ ವರ್ಷದ ಹಿಂದೆ ನಿರ್ಧಾರ ಕೈಗೊಂಡಿತ್ತು. ಆದರೆ, ಈ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತ್ತಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದು ಎಸೆಯುವ ಪ್ರತಿಯೊಬ್ಬರನ್ನು ಗುರುತಿಸುವ ಕಾರ್ಯ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಯೊಬ್ಬರನ್ನು ಸಿಸಿ ಕ್ಯಾಮರಾದಲ್ಲಿ ಗುರುತಿಸಿ ಬಿಬಿಎಂಪಿ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂತಹ ಕ್ರಮ ಮೈಸೂರಿನಲ್ಲೂ ತುರ್ತಾಗಿ ಆಗಬೇಕಾಗಿದೆ.

ಸ್ವಚ್ಛ ಸರ್ವೇಕ್ಷಣೆಗೆ ಸೀಮಿತವಾಗದಿರಲಿ

ಪ್ರತಿ ಬಾರಿ ಸ್ವಚ್ಛ ಸರ್ವೇಕ್ಷಣೆ ಸಂದರ್ಭದಲ್ಲಿ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ನಂತರ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಈ ಹಿಂದೆ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸಲು ಪ್ರಾರಂಭಿಸಿದಾಗ ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಬಹುತೇಕ ಸ್ಥಗಿತಗೊಂಡಿತ್ತು. ಆದರೆ, ನಂತರ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸದ ಪರಿಣಾಮ ಮತ್ತೆ ಬಳಕೆಯ ಪ್ರಮಾಣ ಹೆಚ್ಚಾಯಿತು. ಇದೀಗ ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುವ ಕಾರ್ಯ ಕೈಗೊಂಡಿದ್ದು, ಇದು ಕೇವಲ ಸ್ವಚ್ಛ ಸರ್ವೇಕ್ಷಣೆಗೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲ ದಿನವೂ ಮುಂದುವರೆದರೆ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ರೂಪಿಸಲು ಸಹಕಾರಿಯಾಗುತ್ತದೆ.

ದಂಡ ವಿಧಿಸಿದರೆ ದೊರೆಯಲಿದೆ ಅಂಕ

ನಗರವನ್ನು ಶುಚಿಯಾಗಿಡಲು ಕೇವಲ ಜಾಗೃತಿ ಕಾರ್ಯಕ್ರಮಗಳು ಮಾತ್ರ ಸಾಕಾಗುವುದಿಲ್ಲ. ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದಿಸದೆ ಇರುವವರಿಗೆ ದಂಡ ವಿಧಿಸುವ ಮೂಲಕ ಅವರನ್ನು ಸರಿದಾರಿಗೆ ತರುವ ಕಾರ್ಯ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ದಂಡ ವಿಧಿಸಿದರೆ ಅದಕ್ಕೆ ಅಂಕಗಳನ್ನು ಸಹ ನೀಡಲಾಗುವುದು. ಈ ಬಾರಿ ಒಟ್ಟು 12,500 ಅಂಕಗಳಿಗೆ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದ್ದು, ನಗರದ ವಿವಿಧೆಡೆ ಸ್ವಚ್ಛತೆಗೆ ಸಹಕರಿಸದೆ ಇರುವವರಿಗೆ ದಂಡ ವಿಧಿಸಿದರೆ ಅದಕ್ಕೆ ಒಟ್ಟು 200 ಅಂಕಗಳನ್ನು ನೀಡಲಾಗುವುದು. ಪಾಲಿಕೆಯ ದಂಡ ವಿಧಿಸುವ ಕ್ರಮದಿಂದ ಈ ಬಾರಿ 200 ಅಂಕಗಳು ದೊರೆಯಲಿದೆ.

ನಗರವನ್ನು ಸ್ವಚ್ಛವಾಗಿಡಲು ನಗರದ ಪ್ರತಿಯೊಬ್ಬರು ಸಹಕಾರ ನೀಡುವ ಅವಶ್ಯಕತೆ ಇದೆ. ಆದರೆ, ನಗರದ ಕೆಲವು ಕಡೆ ಅನೈರ್ಮಲ್ಯ ಸೃಷ್ಟಿಸುತ್ತಿರುವವರನ್ನು ಗಮನಿಸಿ ಅವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ನಗರದಲ್ಲಿ ವಿವಿಧ ಪ್ರಕರಣಗಳಲ್ಲಿ 2 ಲಕ್ಷ ರೂ. ದಂಡ ವಿಧಿಸಲಾಗಿದೆ.

ಶೇಖ್ ತನ್ವೀರ್ ಆಸಿಫ್, ನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net