

ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯು ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾ.೨೮ ರಂದು ಚುನಾವಣೆ ಅಧಿಸೂಚನೆ ಹೊರಡಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಲೋಕಸಭಾ ಚುನಾವಣೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ನಾಮಪತ್ರ ಸಲ್ಲಿಸಲು ಏ.೪ ಕೊನೆಯ ದಿನವಾಗಿದೆ. ಏ.೫ ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏ.೮ ರಂದು ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿದೆ. ಏ.೨೬ ರಂದು ಮತದಾನ ನಡೆಯಲಿದ್ದು, ಜೂ.೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ೪,೬೬,೧೫೪ ಮತದಾರರು ಇದ್ದು, ಇವರಲ್ಲಿ ೨,೨೮,೪೭೮ ಪುರುಷ ಮತದಾರರು ಮತ್ತು ೨,೩೭,೬೬೦ ಮಹಿಳಾ ಮತದಾರರು ಇದ್ದಾರೆ. ೧೬ ಇತರೆ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೨,೩೬,೫೬೨ ಮತದಾರರು ಇದ್ದು, ಇವರಲ್ಲಿ ೧,೧೫,೧೫೯ ಪುರುಷ ಮತದಾರರು ಮತ್ತು ೧,೨೧,೩೯೪ ಮಹಿಳಾ ಮತದಾರರು ಇದ್ದು, ಇತರೆ ೯ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೨,೨೯,೫೯೨ ಮತದಾರರು ಇದ್ದು, ಇವರಲ್ಲಿ ೧,೧೩,೩೧೯ ಪುರುಷ ಮತದಾರರು ಮತ್ತು ೧,೧೬,೨೬೬ ಮಹಿಳಾ ಮತದಾರರು ಇದ್ದಾರೆ, ೭ ಇತರೆ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ೧,೩೫೭ ಸೇವಾ ಮತದಾರರು ಇದ್ದು, ಇವರಲ್ಲಿ ೧,೨೯೮ ಪುರುಷ ಮತದಾರರು ಹಾಗೂ ೫೯ ಮಹಿಳಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೬೨೨ ಸೇವಾ ಮತದಾರರು ಇದ್ದು, ಇವರಲ್ಲಿ ೫೯೬ ಪುರುಷ ಮತದಾರರು, ೨೬ ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಭಾನಸಭಾ ಕ್ಷೇತ್ರದಲ್ಲಿ ೭೩೫ ಸೇವಾ ಮತದಾರರು ಇದ್ದು, ಇವರಲ್ಲಿ ೭೦೨ ಪುರುಷ ಮತದಾರರು, ೩೩ ಮಹಿಳಾ ಸೇವಾ ಮತದಾರರು ಇದ್ದಾರೆ ಎಂದು ವಿವರಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ೧೮ ರಿಂದ ೧೯ ವಯಸ್ಸಿನ ೯,೦೭೬ ಯುವ ಮತದಾರರು ಇದ್ದು, ೪,೫೪೭ ಪುರುಷ ಯುವ ಮತದಾರರು ಮತ್ತು ೪,೫೨೯ ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ವಿಶೇಷ ಚೇತನ ಮತದಾರರು ಇದ್ದಾರೆ.
ಒಟ್ಟು ೫೪೬ ಮತಗಟ್ಟೆ: ಕೊಡಗು ಜಿಲ್ಲೆಯಲ್ಲಿ ಒಟ್ಟು ೫೪೬ ಮತಗಟ್ಟೆಗಳಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ೨೭೩ ಮತಗಟ್ಟೆ ಹೊಂದಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ರ‌್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಖಾತರಿಪಡಿಸಿಕೊಳ್ಳುವುದು, ಮತಗಟ್ಟೆ ಬಗ್ಗೆ ಮಾಹಿತಿ ಪಡೆಯುವುದು ಇತರೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು/ ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿರವರ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ ೧೯೫೦ಕ್ಕೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಹಾಗೂ ಮೀಸಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರಿ ಅಧಿಕಾರಿ/ ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಸೆಕ್ಟರ್ ಅಧಿಕಾರಿಗಳು ಪ್ರೈಯಿಂಗ್ ಸ್ಕ್ವಾಡ್, ಲೆಕ್ಕ ವೀಕ್ಷಕರ ತಂಡ, ವಿಡಿಯೋ ವಿವಿಂಗ್ ತಂಡ, ವಿಡಿಯೋ ಪರಿಶೀಲನಾ ತಂಡ, ಸಹಾಯಕ ವೆಚ್ಚ ವೀಕ್ಷಕರ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ೪೪ ಸೆಕ್ಟರ್ ಅಧಿಕಾರಿಗಳು, ೨೧ ಪ್ಲೈಯಿಂಗ್ ಸ್ಕ್ವಾಡ್, ೪೨ ಸ್ಟಾಟಿಕ್ ಸರ್ವಿಲೆನ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.