ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ

82b65d55-de20-46cc-967a-c1ecdc26f14f
Published on

ಮೈಸೂರು: ಲೋಕಸಭಾ ಚುನಾವಣೆಗೆ ಮಾ.28 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಉಮೇದುವಾರಿಕೆ ಸಲ್ಲಿಸಲು ಏ.4 ಕೊನೇ ದಿನ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಮಾ.28ರಂದು ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಲಿದ್ದು, ಅಂದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ.26ರಂದು ಮತದಾನ, ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಜೂ.6ಕ್ಕೆ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿತ್ಯ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಿದ್ದಾರ್ಥ ಬಡಾವಣೆಯಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು 25 ಸಾವಿರ ರೂ., ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು 12,500 ರೂ. ಠೇವಣಿ ಪಾವತಿಸಬೇಕು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಮೂನೆ ಎ ಮತ್ತು ಬಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದಾಗಿದೆ. ರಾಜಕೀಯ ಪಕ್ಷದ ಅಭ್ಯರ್ಥಿಯಾದರೆ ಮೈಸೂರು-ಕೊಡಗು ಕ್ಷೇತ್ರದ ಒಬ್ಬ ಮತದಾರರು, ಪಕ್ಷೇತರ, ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾದರೆ ಹತ್ತು ಮತದಾರರು ಸೂಚಕರಾಗಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ನಾಲ್ವರು, ಮೂರು ವಾಹನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು 241 ಸೆಕ್ಟರ್ ಅಧಿಕಾರಿಗಳು, 53 ಫ್ಲೈಯಿಂಗ್ ಸ್ಕ್ವ್ಯಾಡ್, 42 ಸ್ಟ್ಯಾಟಿಕ್, 23 ವಿಡಿಯೋ ತಂಡ, 12 ವಿಡಿಯೋ ವೀವಿಂಗ್ ತಂಡ , 11 ಅಕೌಂಟಿಂಗ್ ಹಾಗೂ 15 ಖರ್ಚು-ವೆಚ್ಚ ವೀಕ್ಷಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ನಗರ ಪೊಲೀಸ್ ಕಮಿಷನರ್ ಬಿ.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಇದ್ದರು.

ಜಿಲ್ಲೆಯಲ್ಲಿ 2,952 ಮತಗಟ್ಟೆ
ಜಿಲ್ಲೆಯಲ್ಲಿ 2,925 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ನಾಲ್ವರು ಅಧಿಕಾರಿಗಳ್ನು ನೇಮಕ ಮಾಡಲಾಗುವುದು. ಚುನಾವಣೆಗೆ 3,784 ಕಂಟ್ರೋಲ್ ಯೂನಿಟ್, 3,784 ಬ್ಯಾಲೆಟ್ ಯೂನಿಟ್ ಮತ್ತು 4,077 ವಿವಿ ಪ್ಯಾಟ್ ಉಪಯೋಗಿಸಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ಜತೆಗೆ ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಸಹಯೋಗದಲ್ಲಿ 97 ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 55 ಸಖಿ ಬೂತ್, 11 ಲೋಕೋಪಯೋಗಿ ಬೂತ್, ಯುವ ಮತದಾರರ ಬೂತ್ 9, ಥೀಂ ಬೆಸ್ಡ್ ಬೂತ್ 9 ಹಾಗೂ 3 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಿಸಿ ವಿವರಿಸಿದರು.
43 ಸಾವಿರಕ್ಕೂ ಹೆಚ್ಚು ಜನ 85 ವರ್ಷದ ಮೇಲ್ಪಟ್ಟವರು ಇದ್ದಾರೆ. ಅದರಲ್ಲಿ ಶೇ.50ರಷ್ಟು ಭಾಗದ ಜನ ನಮಗೆ ಅಂಚೆ ಮತ ಬೇಡ ಎಂದಿದ್ದಾರೆ. ಎಲ್ಲ ಮನೆಗಳನ್ನು ತಲುಪಿದ್ದೇವೆ. ಮನೆ ಮತ ಯಾರಿಗೆಲ್ಲ ಬೇಕು ಎಂಬುದು ಖಚಿತಪಡಿಸಿಕೊಂಡಿದ್ದೇವೆ. ಕೋರಿಕೆ ಸಲ್ಲಿಸಿ ನೋಂದಣಿ ಮಾಡಿಸಿಕೊಂಡವರಿಗೆ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

308 ದೂರು ಸ್ವೀಕಾರ
ಚುನಾವಣಾ ವೆಚ್ಚದ ಉಲ್ಲಂಘನೆ ಪರಿಶೀಲನೆಗೆ ಚುನಾವಣಾ ಆಯೋಗ ರೂಪಿಸಿರುವ ಸಿ-ವಿಜಿಲ್ ಆ್ಯಪ್‌ಗೆ ಈವರೆಗೆ 308 ದೂರುಗಳು ಬಂದಿದ್ದು, 253 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 55 ದೂರುಗಳು ಪರಿಶೀಲನೆ ಹಂತದಲ್ಲಿವೆ ಎಂದು ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.
ಎಲ್ಲಿಯೇ ಅದರೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಗುತ್ತಿರುವ ಬಗ್ಗೆ ಸಿ-ವಿಜಿಲ್ ಆ್ಯಪ್ ಫೋಟೊ ಕಳಿಸಿದರೆ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಆ ದೂರನ್ನು ಆಧಾರವಾಗಿಟ್ಟುಕೊಂಡು ನಮ್ಮ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಿದೆ. ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಅಥವಾ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಅಲ್ಲದೆ ಆ್ಯಪ್‌ನಲ್ಲಿ ಅದು ದಾಖಲಾಗುವುದಿಲ್ಲ. ಹಾಗಾಗಿ ಸಾರ್ವಜನಿಕರು ಯಾರೇ ಅದರೂ ಚುನಾವಣೆ ಅಕ್ರಮ ಕಂಡು ಬಂದರೆ ಧೈರ್ಯವಾಗಿ ದೂರು ನೀಡಬಹುದು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net