

ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಬಿ.ಎಚ್.ನಾಗೂರ ಅವರನ್ನು ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರವು ನಾಮನಿರ್ದೇಶನಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ಡಾ.ಬಿ.ಎಚ್.ನಾಗೂರ ಅವರು ವಿಶಿಷ್ಟ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯನ್ನು ಹೊಂದಿದ್ದಾರೆ. 2012 ರಲ್ಲಿ ಬೆಂಗಳೂರಿನ ಕರ್ನಾಟಕ ಜ್ಞಾನ ಆಯೋಗದಿಂದ ನೇಮಿಸಲ್ಪಟ್ಟ ಕರ್ನಾಟಕ ರಾಜ್ಯ ಯೋಜನಾ ಇಲಾಖೆಯಲ್ಲಿ ಜ್ಞಾನ ಫೆಲೋ ಆಗಿ ಸೇವೆ ಸಲ್ಲಿಸಿದ್ದರು. ಡಾ.ಬಿ.ಎಚ್.ನಾಗೂರ ಅವರು ಪ್ರತಿಷ್ಠಿತ ಡಾ. ಡಿ.ಸಿ. ಪಾವಟೆ ಫೆಲೋಶಿಪ್ ಪುರಸ್ಕೃತ ರಾಗಿದ್ದಾರೆ. ಇದರ ಅಡಿಯಲ್ಲಿ ಅವರು ಯುನೈಟೆಡ್ ಕಿಂಗ್‍ಡಮ್‍ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜಡ್ಜ ಬಿಸಿನೆಸ್ ಸ್ಕೂಲ್‍ನಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ.
ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ ಅವರ ನಾಮನಿರ್ದೇಶನವು ಅವರ ಪರಿಣತಿ ಮತ್ತು ಅರ್ಥಶಾಸ್ತ್ರ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ನೀಡಿದ ಮಹತ್ವದ ಕೊಡುಗೆಗಳಿಗೆ ಸಿಕ್ಕ ಮನ್ನಣೆಯಾಗಿದೆ.
ಆಯೋಗಕ್ಕೆ ನಾಮನಿರ್ದೇಶನರಾದ ಡಾ.ಬಿ.ಎಚ್.ನಾಗೂರ ಅವರನ್ನು ಕವಿವಿ ಕುಲಪತಿ, ಕುಲಸಚಿವರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.