

ವಿಜಯಪುರ: ಕಷ್ಟಕಾಲದಲ್ಲಿಯೂ ‘ಕೈ’ ಹಿಡಿದ ಅಲ್ಪಸಂಖ್ಯಾತ ಸಮುದಾಯದವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಮೂಲಕ ಕೊಟ್ಟ ಬಂಡವಾಳಕ್ಕೆ ಪ್ರತಿಫಲ ನೀಡಬೇಕೆಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಜಂಟಿಯಾಗಿ ಆಗ್ರಹಿಸಿದರು.
ಕಾಂಗ್ರೆಸ್‌ನ ಎಲ್ಲ ಶಾಸಕರ ಗೆಲುವಿನಲ್ಲಿ ಅಲ್ಪಸಂಖ್ಯಾತರ ಪಾತ್ರವಿದೆ. ಯಾವುದೇ ಸಮುದಾಯದ ನಾಯಕರಿದ್ದರೂ ಅವರನ್ನು ಗೆಲ್ಲಿಸುವ ಮೂಲಕ ಅಲ್ಪಸಂಖ್ಯಾತರು ಉದಾರತೆ ಮೆರೆದಿದ್ದಾರೆ. ಹೀಗಾಗಿ ಅವಕಾಶ ವಂಚಿತ ಅಲ್ಪಸಂಖ್ಯಾತ ಸಮುದಾಯದವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಮೂಲಕ ಋಣ ಸಂದಾಯ ಮಾಡಬೇಕೆಂದು ಆಗ್ರಹಿಸುವುದಾಗಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ವಿಜಯಪುರ ನಗರ ವಿಧಾನ ಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಎಲ್ಲ ಸಮುದಾಯದವರಿಗೂ ಅಲ್ಪಸಂಖ್ಯಾತರು ಮತ ಹಾಕುತ್ತಾರೆ. ಆದರೆ, ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಮಾತ್ರ ಕಡೆಗಣಿಸಲ್ಪಡುತ್ತಿದ್ದಾರೆ. ಸ್ಥಳೀಯ ಚುನಾವಣೆಗಳಲ್ಲಿಯೂ ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಯಾರಿಗಾದರೂ ಒಬ್ಬ ಅಲ್ಪಸಂಖ್ಯಾತ ನಾಯಕರಿಗೆ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕೆಂದರು.
ಮುಖಂಡ ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್ ಮಾತನಾಡಿ, ಕಳೆದ 20 ವರ್ಷಗಳಿಂದ ಜಿಲ್ಲೆಯ ಅಲ್ಪಸಂಖ್ಯಾತ ನಾಯಕರು ವಿಧಾನ ಪರಿಷತ್‌ನಿಂದ ವಂಚಿರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಕೊಡುಗೆ ಅಪಾರ. ಜಿಲ್ಲೆಯ ಆರು ಜನ ಶಾಸಕರ ಗೆಲುವಿಗೂ ಶ್ರಮಿಸಿದ್ದೇವೆ. ಅವರು ಹೇಳಿದಂತೆಯೇ ನಡೆದುಕೊಂಡು ಬಂದಿದ್ದೇವೆ. ಯಾವುದೇ ಗುಂಪುಗಾರಿಕೆ ಇಲ್ಲದೇ ಒಟ್ಟಾಗಿ ಚುನಾವಣೆ ಮಾಡಿದ್ದೇವೆ. ಹೀಗಾಗಿ ಆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎರಡು ಬಾರಿ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲೇ ಇಲ್ಲ. ಈ ಬಾರಿಯಾದರೂ ಅವಕಾಶ ನೀಡಬೇಕೆಂದರು.
ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರೇ ಮೂಲ ಬಂಡವಾಳ. ಈ ಮೂಲ ಬಂಡವಾಳವನ್ನೇ ಮರೆತರೆ ಹೇಗೆ? ಮುಸ್ಲಿಂರು ನಿಶ್ಚಿತ ಮತದಾರರು ಎಂಬ ತಾತ್ಸಾರ ಬೇಡ. ಚುನಾವಣೆ ಸಂದರ್ಭ ದರಬಾರ ಮೈದಾನದಲ್ಲಿ ತಾವು ನೀಡಿದ ಭರವಸೆಯಂತೆ ವಿಧಾನ ಪರಿಷತ್‌ಗೆ ಅವಕಾಶ ಕಲ್ಪಿಸಿ. ಕಾಂಗ್ರೆಸ್‌ಗೆ ಕೊಟ್ಟ ಬಂಡವಾಳಕ್ಕೆ ಪ್ರತಿ ಫಲ ಕೇಳುತ್ತಿದ್ದೇವೆ. ಹಾಗೊಂದು ವೇಳೆ ಅವಕಾಶ ಕಲ್ಪಿಸದೇ ಹೋದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಬಿಸಿ ತಟ್ಟುವುದು ನಿಶ್ಚಿತ ಎಂದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಯಾವತ್ತೂ ಕಾಂಗ್ರೆಸ್ ಬಿಟ್ಟಿಲ್ಲ. ಆದರೆ, ಒಂದೇ ಒಂದು ಇಲಾಖೆಯಲ್ಲಿಯೂ ಮುಸ್ಲಿಂ ಅಧಿಕಾರಿಯನ್ನು ಮುಖ್ಯಸ್ಥನಾಗಿಸಿಲ್ಲ. ಆಯಕಟ್ಟಿನ ಹುದ್ದೆಯಲ್ಲಿ ಕೂರಿಸಿಲ್ಲ. ಇಷ್ಟೆಲ್ಲ ಬೆಂಬಲ ನೀಡಿದರೂ ಯಾವೊಬ್ಬ ನಾಯಕರೂ ಅವಕಾಶ ನೀಡದೇ ಹೋದರೆ ಹೇಗೆ? ಎರಡನೇ ದರ್ಜೆ ಪ್ರಜೆಗಳಾಗಬೇಡಿ ಎಂದು ಚುನಾವಣೆ ಸಂದರ್ಭ ಹೇಳಿದವರೇ ಇಂದು ಅಲ್ಪಸಂಖ್ಯಾತರನ್ನು ಮೂರನೇ ದರ್ಜೆ ಪ್ರಜೆಗಳನ್ನಾಗಿಸುತ್ತಿದ್ದಾರೆ. ನಿಮಗೋಸ್ಕರ ಹಗಲಿರುಳು ಶ್ರಮಿಸಿದ ಅಲ್ಪಸಂಖ್ಯಾತರಿಗೆ ಪ್ರತಿಯಾಗಿ ಮಾಡಿದ್ದೇನು? ಎಲ್ಲೋ ಬಿಡಿಎದಂಥ ಸಣ್ಣ ಪುಟ್ಟ ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಿದರೆ ಆಗಲ್ಲ. ವಿಧಾನ ಪರಿಷತ್‌ನಂಥ ಪ್ರಮುಖ ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಆದರೆ ಅಲ್ಪಸಂಖ್ಯಾತರಿಗೆ ಕಡೆಗಣಿಸಲಾಗಿದೆ. ನಿಗಮ ಮಂಡಳಿಗೂ ಅವಕಾಶ ಸಿಕ್ಕಿಲ್ಲ. ಮುಸಲ್ಮಾನರು ಕಾಂಗ್ರೆಸ್‌ಗೆ ಅಂಧಭಕ್ತರಾಗಿ ಮತ ಚಲಾಯಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸುತ್ತಿದ್ದಾರೆ. ಆದರೂ ನಿರ್ಲಕ್ಷೃವೇಕೆ? ಜಿಲ್ಲೆಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಿ ಅವಕಾಶ ನೀಡಬೇಕೆಂದು ಕೋರಿದರು.
ಮುಖಂಡ ನಸೀಮ ರೋಜಿನದಾರ ಹಾಗೂ ಫಯಾಜ್ ಕಲಾದಗಿ ಮತ್ತಿತರರಿದ್ದರು.