

ಹಾನಗಲ್ಲ: ನಗರದ ಪಾಳಾ ರಸ್ತೆಯ ಹೆಸರಿಲ್ಲದ ಬಡಾವಣೆಯಲ್ಲಿ ಕಳೆದ ಎಂಟು ತಿಂಗಳಿಂದ ವಾಸ ಮಾಡುತ್ತಿರುವ ಅಲೆಮಾರಿ ಸುಡುಗಾಡು ಸಿದ್ದರು, ಡೊಂಬರ ಸಮುದಾಯದ 40 ಕುಟುಂಬಗಳು ಮೂಲಸೌಲಭ್ಯಕ್ಕಾಗಿ ಪರದಾಡುತ್ತಿವೆ. ವಿದ್ಯುತ್ ಸಂಪರ್ಕ ಇಲ್ಲದ ಅಸುರಕ್ಷಿತ ಪರಿಸರದಲ್ಲಿ ವಾಸ ಮಾಡುತ್ತಿದ್ದಾರೆ.
ಹಾನಗಲ್ಲ ಪಟ್ಟಣದ ಖಾಸಗಿ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡಿದ್ದ ಅಲೆಮಾರಿ ಸುಡುಗಾಡು ಸಿದ್ಧರು, ಡೊಂಬರು ಸಮುದಾಯದ ಅಲೆಮಾರಿ ಕೆಲಸಗಾರರು ಈ ಹಿಂದೆ ಮಳೆ ಕಾರಣದಿಂದಾಗಿ ಹಾಕಿಕೊಂಡ ಟೆಂಟ್‌ಗಳು ಬಿದ್ದು ಬೀದಿಗೆ ಬಿದ್ದರು. ನಂತರ ನವನಗರದಲ್ಲಿರುವ ನೀರಿನ ಟ್ಯಾಂಕ್ ಬಳಿ ವಾಸಕ್ಕೆ ಮುಂದಾದರು. ಅಲ್ಲಿಯೂ ಅದೇ ಸ್ಥಿತಿ ಬಂತು. ಅಂತಿಮವಾಗಿ ಪುರಸಭೆ ಆಡಳಿತ ಹಾನಗಲ್ಲಿನಿಂದ ಪಾಳಾ ರಸ್ತೆಯ ಬದಿ ಜಾಗದಲ್ಲಿ ತಲಾ 20/30 ಅಳತೆಯ ನಿವೇಶನವನ್ನು 40 ಕುಟುಂಬಗಳಿಗೆ ನೀಡಲಾಯಿತು. ಇನ್ನೂ 9 ಜನರಿಗೆ ನಿವೇಶನ ಹಕ್ಕುಪತ್ರ ನೀಡಿಲ್ಲ. ಇಲ್ಲಿ 21 ಸುಡುಗಾಡು ಸಿದ್ಧರು, 12 ಡೊಂಬರು ಹಾಗೂ ಇತರ 7 ಕುಟುಂಬಗಳು ವಾಸವಾಗಿವೆ. 120ಕ್ಕೂ ಅಧಿಕ ಜನರ ವಾಸ ಇಲ್ಲಿದೆ. ಈ ನಿವೇಶನಗಳಲ್ಲಿ ಮುಖ್ಯವಾಗಿ ರಸ್ತೆ ಸಮಸ್ಯೆ ಇದೆ. ಮಳೆ ಬಂತೆಂದರೆ ಇಲ್ಲಿ ಓಡಾಡುವುದೂ ಕಷ್ಟ. ಕುಡಿಯುವ ನೀರಿಗಾಗಿ ಪುರಸಭೆ ಕೊರೆದ ಕೊಳವೆ ಬಾವಿಯಲ್ಲಿ ನೀರು ಬರಲೇ ಇಲ್ಲ. ಪಕ್ಕದ ಖಾಸಗಿಯವರ ಹೊಲದ ಕೊಳವೆ ಭಾವಿಯ ನೀರನ್ನೇ ಅವರು ಅವಲಂಬಿಸಿದ್ದಾರೆ. ಅದು ಕೂಡ ಆಗಾಗ ಕೈ ಕೊಡುತ್ತದೆ. ಅಲ್ಲಿಂದ ದೂರದ ದರ್ಗಾದಿಂದ ನೀರು ತರುವ ಸ್ಥಿತಿ ಇದೆ.
ವಿದ್ಯುತ್ ವ್ಯವಸ್ಥೆಯಂತೂ ತೀರ ಆತಂಕಕಾರಿಯಾಗಿದೆ. ಪಕ್ಕದಲ್ಲಿದ್ದ ಒಂದು ವಿದ್ಯುತ್ ಕಂಬದಿಂದ ವೈರಗಳ ಮೂಲಕ ತಾವೇ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇಲ್ಲಿ ಸುರಕ್ಷಿತವಾದ ಕಂಬ, ತಂತಿಗಳನ್ನು ಹಾಕಿ ವಿದ್ಯುತ್ ಪೂರೈಕೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಪುರಸಭೆ ಹಾಗೂ ಕಂದಾಯ ಇಲಾಖೆ ಶೀಘ್ರ ಕ್ರಮ ಜರುಗಿಸಬೇಕಾಗಿದೆ.
ಸ್ವಚ್ಛ ಭಾರತ್, ಬಹಿರ್ದೆಸೆ ಬೇಡ ಎನ್ನುವ ಸರ್ಕಾರಗಳಿಗೆ ಇಂತಹ ಬಡ ಅಲೆಮಾರಿ ಕುಟುಂಬಗಳಿಗೆ ಶೌಚಗೃಹ ವ್ಯವಸ್ಥೆ ಮಾಡದಿರುವುದು ಶೋಚನೀಯ. ಇಲ್ಲಿನ ಯಾವುದೇ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ಹಾಕಿಕೊಟ್ಟಿಲ್ಲ. ಸೀರೆ, ತಾಡಪಲ್ಲು, ಕೌದಿಗಳಿಂದ ಮನೆ ಕಟ್ಟಿಕೊಂಡ ಇವರ ಬದಕು ನಿಜಕ್ಕೂ ಇನ್ನೂ ಅಲೆಮಾರಿಯೇ ಆಗಿದೆ.
ಇಲ್ಲಿರುವ 40 ಕುಟುಂಬಗಳಿಗೆ ಕೊಟ್ಟ ಹಕ್ಕು ಪತ್ರದಲ್ಲಿ 20/30 ಅಳತೆಯ 600 ಚದರ ಅಡಿ ಜಾಗ ಎಂದು ಗುರುತಿಸಲಾಗಿದೆ. ವಾಸ್ತವವಾಗಿ ಜಾಗ ಕಡಿಮೆಯಿದೆ. ಇದನ್ನು ಸರಿಪಡಿಸಿಕೊಡಲು ತಾಲೂಕು ತಹಸೀಲ್ದಾರರು ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಜಾರ್, ಮಿಕ್ಸಿ ರಿಪೇರಿ, ಸ್ಟೇಶನರಿ, ಬಳೆ, ಬಟ್ಟೆ ವ್ಯಾಪಾರವನ್ನು ಹಳ್ಳಿ ಪಟ್ಟಣ ಸುತ್ತಿ ಮಾಡುತ್ತಿರುವ ಇವರಿಗೊಂದು ಸೂರು ಕೂಡ ಇಲ್ಲ. ಆನ್‌ಲೈನ್ ವ್ಯಾಪಾರದಿಂದಾಗಿ ವ್ಯಾಪಾರದ ಲಾಭವೂ ಅಷ್ಟಕ್ಕಷ್ಟೇ. ದಿನಕ್ಕೆ ಒಂದು ಕೂಲಿಯ ಹಣವೂ ಹುಟ್ಟದು. ಒಂದು ಕಡೆ ಹೊಟ್ಟೆ ತುಂಬಿಕೊಳ್ಳುವ ಸಮಸ್ಯೆಯಾದರೆ, ಇನ್ನೊಂದೆಡೆ ಸೂರನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಸಮಸ್ಯೆ ಇವರಿಗಿದೆ. ದೊಡ್ಡ ಗಾಳಿ ಮಳೆ ಬಂದರೆ ತಾತ್ಕಾಲಿಕವಾಗಿ ಹಾಕಿಕೊಂಡ ಗುಡಿಸಲುಗಳು ಉಳಿಯುವುದು ಅನುಮಾನ.
ನಮಗೆ ಶಾಶ್ವತವಾದ ಒಂದು ಸಣ್ಣ ಮನೆ ಬೇಕು. ಅನುದಾನ ಬಂದಿಲ್ಲ, ಬಂದ ಮೇಲೆ ಮನೆ ಕಟ್ಟಿಕೊಡುತ್ತೇವೆ ಎನ್ನುತ್ತಾರೆ. ನಮ್ಮ ಸ್ಥಿತಿಯಲ್ಲಿರುವವರಿಗೆ ಸರ್ಕಾರ ವಿಳಂಬವಿಲ್ಲದೆ ಅನುಕೂಲ ಕಲ್ಪಿಸಬೇಕು. ಮನೆ, ರಸ್ತೆ, ವಿದ್ಯುತ್, ನೀರು ಸರಿಯಾಗಿಲ್ಲದ ಅಲೆಮಾರಿ ಬದುಕು ನಮ್ಮದು. ನಮ್ಮ ಮನೆಗಳನ್ನು ಬಂದು ನೋಡಿ. ದಾರಿ ತೋರಿಸಿ. 2012ರಿಂದಲೇ ಇದಕ್ಕಾಗಿ ಪುರಸಭೆ, ತಹಸೀಲ್ದಾರ್ ಕಚೇರಿಗೆ ಅಲೆದಾಡಿದ್ದೇವೆ. ನಮ್ಮ ಮೇಲೆ ಕರುಣೆ ತೋರಿಸಿ. ಸೋಮಣ್ಣ ಕೂಡ್ಲಿಗಿ, ದುರಗಪ್ಪ ವಿಭೂತಿ. ಸುಡುಗಾಡುಸಿದ್ದ ಸಮುದಾಯದವರು ಇಲ್ಲಿ ವಾಸಿಸುವವರಿಗೆ ಜಾಗ ಅಳತೆಯ ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸುತ್ತೇವೆ. ತಾತ್ಕಾಲಿಕವಾಗಿ ಪಕ್ಕದ ಬೋರ್‌ವೆಲ್‌ನಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದು, ಕೂಡಲೇ ಅವರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಸ್.ರೇಣುಕಾ, ತಹಸೀಲ್ದಾರ್ ಹಾನಗಲ್ಲ ಸುಡುಗಾಡು ಸಿದ್ಧರು ಮತ್ತು ಡೊಂಬರು ಸಮುದಾಯದ ಅಲೆಮಾರಿಗಳು ಖಾಸಗಿ ಜಾಗಗಳಲ್ಲಿ ಅಸುರಕ್ಷಿತ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಅವರ ಈ ಕಷ್ಟವನ್ನು ಪರಿಗಣಿಸಿ ಪುರಸಭೆಯಿಂದ ಅವರಿಗೆ ಶಾಶ್ವತ ನಿವೇಶನ ನೀಡಲಾಗಿದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು ರಸ್ತೆ, ವಿದ್ಯುತ್ ವ್ಯವಸ್ಥೆಗೆ ಮುಂದಾಗುತ್ತೇವೆ. ವೈ.ಕೆ. ಜಗದೀಶ, ಪುರಸಭೆ ಮುಖ್ಯಾಧಿಕಾರಿ