ಟೆಂಟ್‌ಮುಕ್ತ ಕರ್ನಾಟಕದ ಸಂಕಲ್ಪ

hnl
Published on

 ಹೊನ್ನಾಳಿ: ಅಲೆಮಾರಿ ಅಭಿವೃದ್ಧಿ ನಿಗಮದ ಮೂಲಕ ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಟೆಂಟ್ ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಎಸ್‌ಸಿ, ಎಸ್‌ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ತಿಳಿಸಿದರು.

ನಗರದ ಹೊರವಲಯದ ದೇವನಾಯಕನಹಳ್ಳಿಯಲ್ಲಿ ವಾಸ ಮಾಡುತ್ತಿರುವ ಶಿಳ್ಳೆಕ್ಯಾತ ಸಮುದಾಯದವರನ್ನು ಶುಕ್ರವಾರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಈಗಾಗಲೇ ಹಲವು ಜಿಲ್ಲೆಗಳಲ್ಲಿರುವ ಅಲೆಮಾರಿ ಜನಾಂಗಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈ ಜನರಿಗೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಇಡೀ ಕರ್ನಾಟಕವನ್ನು ಟೆಂಟ್‌ಮುಕ್ತ ಮಾಡುವ ಗುರಿ ಇದೆ ಎಂದರು.

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ 122 ಅಲೆಮಾರಿ ಸಮುದಾಯಗಳಿದ್ದು, ಅವರಿಗೆ ನೆಲೆ ಕಲ್ಪಿಸುವ ಆದ್ಯ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳ ಪ್ರವಾಸ ಕೈಗೊಂಡು ಸಮಗ್ರ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ಜನಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತಿಮುಖ್ಯ. ಹಾಗಾಗಿ ಈ ಸಮುದಾಯಕ್ಕೆ ಶಿಕ್ಷಣ ಕಲ್ಪಿಸಲು ಸರ್ಕಾರದೊಂದಿಗೆ ಸಮಾಲೋಚಿಸಿ, ರಾತ್ರಿ ಶಾಲೆ ಸೌಲಭ್ಯ ಒದಗಿಸುವಂತೆ ಸಲಹೆ ನೀಡಲಾಗಿದೆ. ಅಲ್ಲದೇ ಕೌಶಲಾಭಿವೃದ್ಧಿ ತರಬೇತಿ ನೀಡುವುದು ಹಾಗೂ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 4 ಲಕ್ಷ ರೂ. ಧನಸಹಾಯ ನೀಡುವ ಯೋಜನೆಗಳಿವೆ ಎಂದು ತಿಳಿಸಿದರು.

ಹೊನ್ನಾಳಿ ಪಟ್ಟಣದಲ್ಲಿ 455 ಅಲೆಮಾರಿ ಕುಟುಂಬಗಳಿದ್ದು ಇವರಿಗೆ ಸೂಕ್ತ ಜಾಗ ಗುರುತಿಸಿ ನಿವೇಶನ ನೀಡಲು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇ.ಒ. ಪ್ರಕಾಶ್, ಸಮಾಜಕಲ್ಯಾಣ ಇಲಾಖೆ ಉಮಾ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಸೇರಿ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net