ಅಲೆಮಾರಿಗಳ ಆಯೋಗ ರಚಿಸಬೆಕು

CTD 12 Alemari
Published on

ಚಿತ್ರದುರ್ಗ: ಗುಡಿಸಲು, ಟೆಂಟ್, ಗುಡಾರ ನಿರ್ಮಿಸಿಕೊಂಡು ವಾಸಿಸುವ ಅಲೆಮಾರಿ, ಅರೆ ಅಲೆಮಾರಿ ಸಮಾಜದವರು ಮುಖ್ಯವಾಹಿನಿಗೆ ಬರಬೇಕಾದರೆ ಅಲೆಮಾರಿಗಳ ಆಯೋಗ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.

ಅಲೆಮಾರಿ ಮಹಾಸಭಾ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ, ವಿಮುಕ್ತಿ ವಿದ್ಯಾಸಂಸ್ಥೆಯಿಂದ ಅಲೆಮಾರಿ ಸಮುದಾಯದ ಸಮಸ್ಯೆ ಮತ್ತು ಸವಾಲುಗಳ ಕುರಿತು ಭಾರತ ಸೇವಾದಳದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಯಾರ ಕಣ್ಣಿಗೂ ಕಾಣುತ್ತಿಲ್ಲ. ಶೇ.8ರಿಂದ 10ರಷ್ಟು ಅಲೆಮಾರಿಗಳು ದೇಶದಲ್ಲಿದ್ದು, ಮಹಾರಾಷ್ಟ್ರ, ಕರ್ನಾಟಕದಲ್ಲೇ ಹೆಚ್ಚು. ರಾಜ್ಯದಲ್ಲಿ 48 ಲಕ್ಷ ಜನಸಂಖ್ಯೆ ಹೊಂದಿದ್ದು, ಕುಲದೀಪ್‌ಸಿಂಗ್ ಆಯೋಗದ ಪ್ರಕಾರ 2ರಿಂದ 2.5 ಲಕ್ಷ ಜನಸಂಖ್ಯೆ ಇದ್ದರೂ ಒಬ್ಬ ಶಾಸಕ ಇರಬೇಕು. ದುರಂತವೆಂದರೆ ಸಚಿವ, ಶಾಸಕ, ಎಂಎಲ್ಸಿ ಒಬ್ಬರೂ ಇಲ್ಲ. ಜಿಪಂ ಸದಸ್ಯ, ಮೇಯರ್ ಕೂಡ ಯಾರು ಆಗಿಲ್ಲ. ರಾಜಕೀಯ ಶಕ್ತಿ ಇಲ್ಲದ ಕಾರಣ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ವಿಷಾದಿಸಿದರು.

ತುಮಕೂರು, ಚಿತ್ರದುರ್ಗದಲ್ಲೇ ಈ ಸಂಖ್ಯೆ ಹೆಚ್ಚಿದೆ. ಭೂಮಿ, ಮನೆ, ಶಿಕ್ಷಣ, ಆರೋಗ್ಯ, ಜಾತಿ ಪ್ರಮಾಣ ಪತ್ರ ಸಮಸ್ಯೆ ಇವೆಲ್ಲ ನಿವಾರಣೆಯಾಗಲು ಅಲೆಮಾರಿ ಸಮುದಾಯದ 32 ಜಾತಿ ಜನರನ್ನು ಒಗ್ಗೂಡಿಸಿ, ಮುಖ್ಯಮಂತ್ರಿ ಬಳಿ ಚರ್ಚಿಸಿ ಆಯೋಗ ರಚಿಸಲು ಒತ್ತಾಯಿಸಿದ್ದೇನೆ ಎಂದರು.

ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಕೊಡುಗೆಯಿಂದಾಗಿ ದೇಶಕ್ಕೆ ಸುಭದ್ರವಾದ ಸಂವಿಧಾನ ದೊರೆತಿದೆ. ಇದನ್ನು ಎಲ್ಲರೂ ಓದಿ, ಅರ್ಥೈಸಿಕೊಂಡಾಗ ಮಾತ್ರ ತಮ್ಮ ಹಕ್ಕು ಏನೆಂಬುದು ತಿಳಿಯಲಿದೆ. ಪ್ರಶ್ನಿಸುವ ಮನೋಭಾವದಿಂದ ಮಾತ್ರ ಶೋಷಣೆಯಿಂದ ಹೊರಬರಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರತಿ ಜಿಲ್ಲೆಯಲ್ಲೂ 20ರಿಂದ 25 ಕೋಟಿ ರೂ. ಅನುದಾನ ಸರ್ಕಾರಕ್ಕೆ ಹಿಂದಿರುಗುತ್ತಿದೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಅಂಬೇಡ್ಕರ್ ಅವರ ಸಂವಿಧಾನದ ಆಶಯ ಈಡೇರಲಿದೆ ಎಂದು ಹೇಳಿದರು.

ಶ್ರೀ ಬಸವ ರಮಾನಂದ ಸ್ವಾಮೀಜಿ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಎನ್.ಅರುಣ್‌ಕುಮಾರ್, ಅಲೆಮಾರಿ ಮಹಾಸಭಾ ಅಧ್ಯಕ್ಷ ಕೆ.ಎಂ.ನಾಗರಾಜ್, ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್.ವಿಶ್ವಸಾಗರ್, ಬಡಗ ಜಂಗಮ ಸಂಘದ ಅಧ್ಯಕ್ಷ ಗುರುಮೂರ್ತಿ, ಕೊರಚ ಸಂಘದ ಜಿಲ್ಲಾಧ್ಯಕ್ಷ ವೈ.ಕುಮಾರ್, ವಕೀಲ ಪ್ರತಾಪ್‌ಜೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net