ಅಲೆಮಾರಿಗಳ ಮನೆಯಲ್ಲಿ ಪಲ್ಲವಿ ವಾಸ್ತವ್ಯ

15Jaggu120
ಬೆಳಗಾವಿಯ ನೆಹರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿ.ಪಲ್ಲವಿ ಭಾನುವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
Published on

ಬೆಳಗಾವಿ: ತಾಲೂಕಿನ ಹೊನಗಾ ಹೋಬಳಿ ವ್ಯಾಪ್ತಿಯ ದಾಸರವಾಡಿಯ ಅಲೆಮಾರಿಯೊಬ್ಬರ ಮನೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಶನಿವಾರ ರಾತ್ರಿ ವಾಸ್ತವ್ಯ ಮಾಡಿದರು.

ಮನೆಗೆ ಆಗಮಿಸಿದ ಪಲ್ಲವಿ ಅವರನ್ನು ಪರಶುರಾಮ ಮೊರೆಣ್ಣವರ ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡರು. ಗ್ರಾಮಸ್ಥರೊಂದಿಗೆ ಕುಳಿತು ಅಧ್ಯಕ್ಷೆ ಊಟ ಮಾಡಿದರು. ಅಲೆಮಾರಿ ಸಮುದಾಯದವರು ತೀರಿಕೊಂಡರೆ ಅಂತ್ಯಕ್ರಿಯೆ ಮಾಡಲು ಇರುವ ಸ್ಮಶಾನಭೂಮಿ ಚಿಕ್ಕದಾಗಿದೆ. ಅದನ್ನು ವಿಸ್ತರಿಸಬೇಕು. ನಾವು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು. ಮುಖ್ಯರಸ್ತೆಯಿಂದ ನಮ್ಮೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಪಲ್ಲವಿ ಭರವಸೆ ನೀಡಿದರು.

ವಸತಿ ಶಾಲೆಗೆ ಭೇಟಿ: ಇಲ್ಲಿನ ನೆಹರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿ.ಪಲ್ಲವಿ ಭಾನುವಾರ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಬೇಡಿಕೆ ಆಲಿಸಿದರು.

ಸಮನ್ವಯದಿಂದ ಕೆಲಸ ಮಾಡಿ: ಅಲೆಮಾರಿ ಸಮುದಾಯದ ಜನರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಮತ್ತು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಪಲ್ಲವಿ ಹೇಳಿದರು. ಭಾನುವಾರ ಏರ್ಪಡಿಸಿದ್ದ ಅಲೆಮಾರಿ ಸಮುದಾಯದ ಮುಖಂಡರ ಕುಂದುಕೊರತೆ ಆಲಿಸುವ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಮುದಾಯಕ್ಕಾಗಿ ರೂಪಿಸಿದ ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗುತ್ತಿಲ್ಲ. ಹಾಗಾಗಿ ಅಲೆಮಾರಿ ಅಭಿವದ್ಧಿ ನಿಗಮದ ಕಚೇರಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ, ಪ್ರತ್ಯೇಕವಾಗಿ ಸ್ಥಾಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಪಲ್ಲವಿ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net