

ಕಿರಣ್ ಮಾದರಹಳ್ಳಿ ಚಾಮರಾಜನಗರ
ಕರೊನಾ ಸೋಂಕು ತಡೆ ನಿಟ್ಟಿನಲ್ಲಿ ಸರ್ಕಾರ ಮದುವೆ ಸಮಾರಂಭಗಳಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಪರಿಣಾಮ, ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದ್ದು, ವಿಜೃಂಭಣೆಯ ವಿವಾಹಗಳನ್ನೇ ಅವಲಂಬಿಸಿದ್ದ ಉದ್ಯಮಗಳನ್ನು ಶೇಕ್ ಮಾಡಿದೆ.
ಲಾಕ್‌ಡೌನ್ ನಿಯಮಗಳು ಸಡಿಲಿಕೆಯಾಗುತ್ತಿದ್ದರೂ ಮದುವೆಯ ಕಟ್ಟುಪಾಡುಗಳು ಮಾತ್ರ ಸರಳಗೊಳ್ಳುತ್ತಿಲ್ಲ. ಮದುವೆ ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಬಾರದು, ಗರ್ಭಿಣಿಯರು, 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನೀಡುವಂತಿಲ್ಲ ಎಂಬುದು ಸೇರಿದಂತೆ ಮಾರ್ಗಸೂಚಿಯಲ್ಲಿರುವ ಒಟ್ಟು 17 ನಿಯಮಗಳು ಅದ್ದೂರಿ ವಿವಾಹದ ಯೋಚನೆಯನ್ನೇ ಕೈಬಿಡುವಂತೆ ಮಾಡಿವೆ.
‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎನ್ನುವ ಹಳೆಯ ಗಾದೆಯ ಜತೆಗೆ ಪ್ರಸ್ತುತ ‘ಕರೊನಾ ಹೋಗುವವರೆಗೂ ಮನೆಯಲ್ಲೇ ಮದುವೆ ಮಾಡು’ ಎಂಬ ಮಾತು ಪ್ರಚಲಿತಕ್ಕೆ ಬಂದಿದೆ.
ಹೀಗೆ ಅಬ್ಬರದ ಮದುವೆಗಳು ಪ್ರತಿಷ್ಠೆಯ ಅಂಗಳದಿಂದ ಮನೆಯ ಆವರಣದತ್ತ ಸರಳ ಹೆಜ್ಜೆ ಇಡುತ್ತಿದ್ದರೆ, ಅದ್ದೂರಿ ವಿವಾಹಗಳನ್ನೇ ನಂಬಿದ್ದ ಕಲ್ಯಾಣ ಮಂಟಪ, ಹೂ ಮಾರಾಟಗಾರರು, ಬಟ್ಟೆ ಅಂಗಡಿ, ಚಿನ್ನದಂಗಡಿ, ಬ್ಯೂಟಿ ಪಾರ್ಲರ್, ಶಾಮಿಯಾನ, ಬಸ್, ಟ್ಯಾಕ್ಸಿ, ಪ್ರಿಂಟಿಂಗ್‌ಪ್ರೆಸ್, ದಿನಸಿ ಮತ್ತು ತರಕಾರಿ ಅಂಗಡಿ ಮಾಲೀಕರು ಆರ್ಥಿಕ ಸಂಷ್ಟಕ್ಕೆ ಸಿಲುಕುವಂತಾಗಿದೆ.
ವಾದ್ಯವೃಂದ, ಪುರೋಹಿತರು, ಛಾಯಾಗ್ರಾಹಕರು, ಅಡುಗೆ ಭಟ್ಟರು, ಆರ್ಕೆಸ್ಟ್ರಾ ಕಲಾವಿದರು, ಸಮುದಾಯ ಭವನಗಳಲ್ಲಿ ಊಟದ ಹಾಲ್ ಸ್ವಚ್ಛಗೊಳಿಸಿ ಉಳಿದ ಆಹಾರವನ್ನು ಮನೆಗಳಿಗೆ ಕೊಂಡೊಯ್ಯುತ್ತಿದ್ದವರು ಮತ್ತಿತರರು ಬೀದಿಗೆ ಬರುವಂತಾಗಿದೆ.
ದೊಡ್ಡ ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಸೇರಿದಂತೆ ಸಿರಿವಂತರು ಅದ್ದೂರಿ ವಿವಾಹಗಳನ್ನು ಮಾಡುತ್ತಿದ್ದಾಗ ಈ ರೀತಿ ಸಂಪತ್ತು ಪ್ರದರ್ಶಿಸಿ ಸಾಧಿಸುವುದಾದರೂ ಏನು? ಎರಡು ಜೀವ, ಮನಸ್ಸುಗಳ ಬೆಸುಗೆಗೆ ಹಿರಿಯರ ಆಶೀರ್ವಾದ, ನಿಕಟ ಬಂಧು-ಬಳಗದ ಶುಭ ಹಾರೈಕೆ ಇದ್ದರೆ ಸಾಕಲ್ಲವೇ ಎಂದು ಪ್ರಶ್ನಿಸುತ್ತಿದ್ದವರು ಈಗ ಅಂತಹ ವಿವಾಹಗಳಿಲ್ಲದೆ ನೆಲಕಚ್ಚಿರುವ ಉದ್ಯಮಗಳನ್ನು ಕಂಡು ಮರುಗುತ್ತಿದ್ದಾರೆ.
ನಂಟು ಬೆಸೆಯುತ್ತಿದೆ, ಗಂಟು ಕಳಚುತ್ತಿದೆ: ಲಾಕ್‌ಡೌನ್ ಕಾರಣ ಸರಳವಾಗಿ ನಡೆಯುತ್ತಿರುವ ಮದುವೆಗಳಲ್ಲಿ ಗಂಡು-ಹೆಣ್ಣಿನ ನಂಟು ಬೆಸೆಯುತ್ತಿದೆ. ಆದರೆ, ಅದ್ದೂರಿ ವಿವಾಹಗಳನ್ನು ನಂಬಿದ್ದ ಉದ್ಯಮಿಗಳ ಗಂಟು ಕಳಚುತ್ತಿದೆ.
ಕಳೆದ ಮಾ. 23ರಿಂದ ಕಲ್ಯಾಣ ಮಂಟಪದಲ್ಲಿ ಮದುವೆಗಳನ್ನು ನಡೆಸಲು ನಿರ್ಬಂಧ ವಿಧಿಸಲಾಯಿತು. ಒಂದು ತಿಂಗಳ ಮೊದಲೇ ವಿವಾಹ ಸಮಾರಂಭಕ್ಕಾಗಿ ಕನ್ವೆನ್ಷನ್ ಹಾಲ್ ಬುಕ್ ಮಾಡಿಕೊಂಡಿದ್ದವರಿಗೆ ಮಾಲೀಕರು ಹಣ ಹಿಂದಿರುಗಿಸಿದ್ದಾರೆ. 56 ದಿನಗಳಿಂದ ಆದಾಯವಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುವವರು ಉದ್ಯೋಗದಿಂದ ವಂಚಿತರಾಗಿದ್ದಾರೆ. ವಿವಾಹ ಕಾರ್ಯಕ್ರಮಗಳಿಗಾಗಿ ನಡೆಯುವ ಫ್ಲವರ್ ಡೆಕೋರೇಷನ್ ಮತ್ತು ಹೂ ಖರೀದಿ ನಿಂತು ಹೋಗಿದೆ. ಇದರಿಂದ ಹೂ ಬೆಳೆದವರು, ಮಾರಾಟಗಾರರ ಬದುಕು ಬಾಡಿದೆ.
ಒಂದೆರಡು ಮದುವೆ ಕೆಲಸ ಮಾಡಿ ತಿಂಗಳು ಪೂರ್ತಿ ಆರಾಮದಾಯಕ ಜೀವನ ನಡೆಸುತ್ತಿದ್ದ ಛಾಯಾಗ್ರಾಹಕರು ಸಂಕಷ್ಟಕ್ಕೆ ಸಿಲುಕಿ ಸರ್ಕಾರದ ಬಳಿ ನೆರವು ಕೋರಿದ್ದಾರೆ. ಜವಳಿ ಉದ್ಯಮ, ಚಿನ್ನದಂಗಡಿಗಳ ಗಲ್ಲಾ ಪೆಟ್ಟಿಗೆಯೂ ಸದ್ದು ನಿಲ್ಲಿಸಿದೆ. ವಾಟ್ಸ್‌ಆ್ಯಪ್‌ಗಳಲ್ಲೇ ಮದುವೆಯ ಕರೆಯೋಲೆ ಬಂದು ಲಗ್ನಪತ್ರಿಕೆ ಪ್ರಿಂಟ್ ಆಗುವುದೇ ನಿಂತಿದೆ. ಇದೇ ರೀತಿ ಹಲವು ಕೆಲಸಗಾರರು ಸಮಸ್ಯೆಗೆ ಸಿಲುಕಿದ್ದಾರೆ.
ಸೇಲ್ ಆಗದ ರೇಷ್ಮೆ ಸೀರೆಗಳು: ಮೊದಲೆಲ್ಲ ಕೇರಳ, ತಮಿಳುನಾಡಿಗೆ ರೇಷ್ಮೆನೂಲು ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಎರಡು ತಿಂಗಳಿನಿಂದ ರೇಷ್ಮೆ ಸೀರೆಗಳನ್ನು ಕೊಳ್ಳುವವರಿಲ್ಲದೆ ನೂಲು ಮಾರಾಟವಾಗುತ್ತಿಲ್ಲ ಎಂದು ಯಳಂದೂರು ತಾಲೂಕು ಕೆಸ್ತೂರಿನ ವೆಂಕಟೇಶ್ ಹೇಳುತ್ತಾರೆ.
ರೇಷ್ಮೆ ರೀಲರ್ ಆಗಿರುವ ಇವರು, 20 ಜನರಿಗೆ ಕೆಲಸ ನೀಡಿದ್ದಾರೆ. ದಿನಕ್ಕೆ 20 ಕೆ.ಜಿ.ಯಷ್ಟು ಕಚ್ಚಾರೇಷ್ಮೆ ಮತ್ತು ದಾರ ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ, ಈಗ ನಾವು ಸಿದ್ಧಪಡಿಸಿದ ದಾರಗಳನ್ನು ರೇಷ್ಮೆಸೀರೆ ತಯಾರಕರು ಖರೀದಿ ಮಾಡುತ್ತಿಲ್ಲ ಎನ್ನುತ್ತಾರೆ.
ಜವಳಿ ಅಂಗಡಿ ಮಾಲೀಕರು ರೇಷ್ಮೆ ಸೀರೆಗಳನ್ನೇ ವಾಪಸ್ ಕಳುಹಿಸುತ್ತಿದ್ದಾರೆ. ಇನ್ನು ನಿಮ್ಮ ಬಳಿ ದಾರ ಖರೀದಿಸಿ ನಾವೇನು ಮಾಡೋಣ ಎಂದು ಸೀರೆ ತಯಾರಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಕರೊನಾ ಸೋಂಕು ಹರಡುವಿಕೆ ತಡೆಗಾಗಿ ನಿಯಮಗಳನ್ನು ವಿಧಿಸಿರುವುದು ಸರಿ. ಮನೆ ಬಳಿಯೇ ಈಗ ಎಲ್ಲರೂ ಮದುವೆ ಮಾಡಿ ಮುಗಿಸುತ್ತಿದ್ದಾರೆ. ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಯುತ್ತಿದ್ದ ದಿನಗಳಂತೆ ಹೂವಿನ ಮಾರಾಟ ನಡೆಯುತ್ತಿಲ್ಲ. ಫ್ಲವರ್ ಡೆಕೋರೇಷನ್ ಅವಶ್ಯಕತೆಯೂ ಇಲ್ಲವಾಗಿದೆ. ಸಿಕ್ಕಷ್ಟು ಸಿಗಲಿ ಎಂದು ಹೂ ಮಾರಾಟದಲ್ಲಿ ತೊಡಗಿದ್ದೇನೆ.
ಸೋಮಶೇಖರ್, ಹೂವು ಮಾರಾಟಗಾರ, ಚಾಮರಾಜನಗರ