ನೊಣವಿನಕೆರೆ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

17 nvk 1
Published on

ನೊಣವಿನಕೆರೆ : ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಕರಿಬಸವಸ್ವಾಮೀಜಿ 227ನೇ ವಾರ್ಷಿಕ ಸ್ಮರಣೋತ್ಸವ, 19ನೇ ಗುರುಗಳಾದ ಶ್ರೀ ಕರಿಬಸವ ದೇಶಿಕೇಂದ್ರಸ್ವಾಮೀಜಿ 12ನೇ ವರ್ಷದ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಪೀಠಾಧ್ಯಕ್ಷ ಡಾ.ಕರಿಬಸವದೇಶಿಕೆಂದ್ರ ಶಿವಯೋಗೀಶ್ವರ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು.

ಕಾಡಸಿದ್ದೇಶ್ವರ ಮಠ 25 ವರ್ಷಗಳಿಂದ ಅನ್ನದಾಸೋಹ, ಅಕ್ಷರ ದಾಸೋಹದ ಜತೆಗೆ ಸಾಮಾಜಿಕ ಬದುಕಿನಲ್ಲಿ ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಸಮಾಜದ ಎಲ್ಲ ವರ್ಗದ ಜನರು ಆರೋಗ್ಯದಿಂದ ಬದುಕುವ ಸಂಕಲ್ಪದ ಮೂಲಕ ಧಾರ್ಮಿಕ ಆಚರಣೆಯಲ್ಲಿ, ಆರೋಗ್ಯ ಶಿಬಿರ ಆಯೋಜಿಸಿ ಸಾರ್ವಜನಿಕರು ಹಾಗೂ ಮಠದ ಭಕ್ತರಿಗೆ ಅನುಕೂಲ ಕಲ್ಪಿಸಿ ಗುರುಗಳ ಕೃಪೆಗೆ ಪಾತ್ರರಾಗೋಣ ಎಂದು ಮಹಾರಾಷ್ಟ್ರದ ಪಾನಮಂಗಳೂರು ಮಠದ ಶ್ರೀ ಶಿವಯೋಗೀಶ್ವರಸ್ವಾಮೀಜಿ ಹೇಳಿದರು.

ನೊಣವಿನಕೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಮಾತನಾಡಿ, ಕಾಡಸಿದ್ದೇಶ್ವರ ಮಠ ಹಾಗೂ ನೊಣವಿನಕೆರೆ ಲಯನ್ಸ್ ಕ್ಲಬ್ ಸಹಯೋಗದಲ್ಲಿ 25ಕ್ಕೂ ಹೆಚ್ಚು ಆರೋಗ್ಯ ತಪಾಸಣೆ ಶಿಬಿರಗಳ ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕುಗ್ರಾಮಗಳಲ್ಲಿ ಶಿಬಿರ ಆಯೋಜಿಸಿ ಅಲ್ಲಿನ ಜನತೆಗೆ ಸೇವೆ ನೀಡುವ ಉದ್ದೇಶವಿದೆ ಎಂದರು.

ಬೃಹತ್ ಕೈಗಾರಿಕಾ ಮತ್ತು ಕೃಷಿ ಮೇಳಕ್ಕೆ ಕಾಡಸಿದ್ದೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಆರ್.ವಿಜಯಕುಮಾರ್, ದಾಸೋಹ ಸಮಿತಿ ಟಿ.ಉಮೇಶ್ ಚಾಲನೆ ನೀಡಿದರು.

ಹೆಗ್ಗಡೆಹಳ್ಳಿ ಮಠದ ಶ್ರೀ ವಿಶ್ವನಾಥ ಸ್ವಾಮೀಜಿ, ತಾಪಂ ಉಪಾಧ್ಯಕ್ಷ ಎನ್.ಶಂಕರ್, ವೈದ್ಯಾಧಿಕಾರಿ ಪ್ರಶಾಂತ್, ಡಾ.ಚನ್ನಕೇಶವ, ಮಠದ ಆಡಳಿತ ಮಂಡಳಿಯ ಶಂಭು, ನೊಣವಿನಕೆರೆ ಲಯನ್ಸ್ ಕ್ಲಬ್ ಸದಸ್ಯರು, ಶಿವಯೋಗೀಶ್ವರ ಪ್ಯಾರ ಮೆಡಿಕಲ್ ಹಾಗೂ ಐಟಿಐ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಇದ್ದರು.

ಉಚಿತ ಆರೋಗ್ಯ ತಪಾಸಣೆ: ಕೃಷಿಮೇಳದಲ್ಲಿ ವಿವಿಧ ಕೈಗಾರಿಕ ಸಂಸ್ಥೆಗಳು, ಕೃಷಿ ಉಪಕರಣ ಮತ್ತು ಗೃಹ ಬಳಕೆಯ ವಸ್ತುಗಳು ವಿಶೇಷದ ಜತೆಗೆ ರೈತರು ಬೆಳೆದ ಉತ್ಪನ್ನಗಳ ಮಾರಾಟ ಮಳಿಗೆ ವಿಶೇಷವಾಗಿದೆ. ಶ್ರೀ ಶಿವಯೋಗೀಶ್ವರ ಆಸ್ಪತ್ರೆ, ಬೆಂಗಳೂರು ಲಯನ್ಸ್ ಬಿ.ಡಬ್ಲ್ಯೂ ಆಸ್ಪತ್ರೆ ಹಾಗೂ ತಾಪಂ ಉಪಾಧ್ಯಕ್ಷ ಎನ್.ಶಂಕರ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net