

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಮೇ 13ರಿಂದ ಮೇ 22ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಬಿಡುಗಡೆಗೆ ಆದೇಶಿಸಲಾಗಿದೆ. ನೀರು ಸದ್ಬಳಕೆ ಆಗುವಂತೆ ನಿಗಾವಹಿಸಲು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶದಂತೆ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕೆ ಮತ್ತು ನರಗುಂದ ಹಾಗೂ ರೋಣ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು 10 ದಿನಗಳ ಅವಧಿಗೆ ಒಟ್ಟು 1.036 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಲಾಗಿದೆ.
ಈ ಸಮಯದಲ್ಲಿ ಅಚ್ಚುಕಟ್ಟು ಪ್ರದೇಶದ ಜನರು, ರೈತರು ನೀರನ್ನು ಕೃಷಿ, ಇತರ ಉದ್ದೇಶಕ್ಕೆ ಪಂಪ್ ಸೆಟ್ಗಳಿಂದ ಬಳಸುವುದನ್ನು ನಿಷೇಧಿಸಲಾಗಿದೆ. ಈ ನಿರ್ಬಂಧ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಈ ಕಾರ್ಯ ಅನುಷ್ಠಾನಕ್ಕೆ ಉಪವಿಭಾಗಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ, ಧಾರವಾಡ ಗ್ರಾಮೀಣ ಪೊಲೀಸ್ ಉಪ ಅಧೀಕ್ಷಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
ನೋಡಲ್ ಅಧಿಕಾರಿಗಳು ನೀರು ದುರುಪಯೋಗವಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕು. ಕೆರೆ ನೀರು ತುಂಬಿಸಲು ವಿಫಲರಾದಲ್ಲಿ ಅಂತಹವರ ಮೇಲೆ ಜರುಗಿಸಲಾಗುವುದು. ನಿರ್ದೇಶನಗಳ ಪಾಲನೆಯಲ್ಲಿ ಲೋಪ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.