

ವಿಜಯವಾಣಿ ಸುದ್ದಿಜಾಲ ಕೋಟ
ಪಾಂಡೇಶ್ವರ ಗ್ರಾಮ ಪಂಚಾಯಿತಿ ಮಹಿಳಾ ಮತ್ತು ಮಹಾತ್ಮಗಾಂಧಿ ಉದ್ಯೋಗಖಾತ್ರಿ ವಿಶೇಷ ಗ್ರಾಮಸಭೆ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.
ನಾಲ್ಕು ವರ್ಷಗಳಿಂದ ಗ್ರಾಮಸಭೆಯಲ್ಲಿ ಅಗತ್ಯವಾಗಿ ಇರಬೇಕಾದ ನೋಡಲ್ ಅಧಿಕಾರಿ ಪ್ರತಿ ಸಭೆಯಲ್ಲಿ ಗೈರಾಗುತ್ತಿದ್ದಾರೆ. ಬೇಜವಾಬ್ದಾರಿ ಹಾಗೂ ಗ್ರಾಮಸಭೆಯನ್ನು ನಿರ್ಲಕ್ಷೃದಿಂದ ಕಾಣುವ ನೋಡಲ್ ಅಧಿಕಾರಿ ಶಿಕ್ಷಣ ಇಲಾಖಾಧಿಕಾರಿಗಳ ವರ್ತನೆ ಖಂಡನೀಯ ಅಲ್ಲದೆ ಈ ಬಗ್ಗೆ ನಿರ್ಣಯ ಕೈಗೊಂಡು ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಪಂಚಾಯಿತಿ ಪ್ರತಿನಿಧಿ ಪ್ರತಾಪ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪರಿಸರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಕೊರತೆ ಎದ್ದು ಕಾಣುತ್ತಿದೆ ಅಲ್ಲದೆ ಅಲ್ಲಿನ ಸಿಬ್ಬಂದಿ ಜನಸ್ನೇಹಿಯಾಗಿ ವರ್ತಿಸುತ್ತಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ ಪ್ರಶ್ನಿಸಿದರು. ಉತ್ತರಿಸಿದ ಲೀಡ್‌ಬ್ಯಾಂಕ್ ಮ್ಯಾನೇಜರ್ ಹರೀಶ್ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿವಿಧ ಇಲಾಧಿಕಾರಿಗಳು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಲೋಲಾಕ್ಷಿ ಉದ್ಯೋಗಖಾತ್ರಿ ವರದಿ ಮಂಡಿಸಿದರು. ಕಾರ್ಯದರ್ಶಿ ವಿಜಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ಗ್ರಾಮಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಮಾಹಿತಿ ನೀಡಲು ಪಂಚಾಯಿತಿ ಇಲಾಖಾಮಟ್ಟದ ಅಧಿಕಾರಿಯಲ್ಲಿ ಸೂಚಿಸಿತ್ತು. ಈ ಬಗ್ಗೆ ಮಾಹಿತಿ ನೀಡಲು ತಾಲೂಕು ಸಂಯೋಜಕ ಅಕ್ಷಯ್‌ಕೃಷ್ಣ ಯತ್ನಿಸುತ್ತಿದ್ದಂತೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ಹೊರಹಾಕಿದ ಪಂಚಾಯಿತಿ ಪ್ರತಿನಿಧಿಗಳು, ಸಮರ್ಪಕ ಮಾಹಿತಿ ಇಲ್ಲ ಎಂದು ಸಭೆಯನ್ನು ಮುಂದುವರಿಸಲು ಸೂಚಿಸಿದರು.
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಿದೆ. ಆದರೆ ವ್ಯಾಪ್ತಿಯ ಕೆಲವು ಫಲಾನುಭವಿಗಳು ವಂಚಿತರಾಗಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾಗೀರಥಿ ಪಂಚಾಯಿತಿ ಸದಸ್ಯ ಸಿಲ್ವಸ್ಟರ್ ಅವರ ಗಮನ ಸೆಳೆದರು. ಐಟಿ, ಜಿಎಸ್‌ಟಿ ಅನುಷ್ಠಾನಗೊಳಿಸಿದವರಿಗೆ ಇದರ ಸಮಸ್ಯೆ ಸೃಷ್ಟಿಯಾಗಿರುವುದು ಸತ್ಯ. ಇನ್ನುಳಿದಂತೆ ತಮ್ಮ ಗಮನಕ್ಕೆ ಬಂದಿರುವ ವಂಚಿತ ಫಲಾನುಭವಿಗಳ ಬಗ್ಗೆ ಮೇಲಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಉತ್ತರಿಸಿದರು.