

ಚಿಕ್ಕಮಗಳೂರು: ಜಿಪಂ ಸಭೆ ನಡೆಯದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಟಿ.ಡಿ.ರಾಜೇಗೌಡರ ನೇತೃತ್ವದಲ್ಲಿ ವಿಭಾಗೀಯ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ತಿಳಿಸಿದರು.
ಜಿಪಂ ಸಭೆ ಮುಂದೂಡಿಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಮುಖಂಡರ ಜತೆ ಚರ್ಚಿಸಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೂ ತಂದು ಸಭೆ ನಡೆಸಲು ಕಾನೂನಿನಲ್ಲಿ ಪರ್ಯಾಯ ಅವಕಾಶಗಳಿವೆಯೇ ಎಂಬುದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅತಿವೃಷ್ಟಿ, ಅನಾವೃಷ್ಟಿ, ಕರೊನಾದಂತಹ ಸಂಕಷ್ಟದ ಸ್ಥಿತಿಯಲ್ಲಿ ವಿಶೇಷ ಸಭೆ ಕರೆದು ಭದ್ರಾ ಮೇಲ್ದಂಡೆ, ಒತ್ತುವರಿ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಈ ರೀತಿ ಸಭೆ ಮುಂದೂಡುತ್ತಿರುವುದು ವಿಷಾದನೀಯ. ಕರೊನಾಕ್ಕೆ ಕೋಟ್ಯಂತರ ಹಣ ಬಿಡುಗಡೆಯಾಗಿದ್ದು ಅದರ ವೆಚ್ಚದ ಬಗ್ಗೆ ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಿಜೆಪಿಯಲ್ಲಿ ವೈಯಕ್ತಿಕ ನೆಲೆಯ ವಿಚಾರವಾಗಿ ಪ್ರಚಾರ ಗಿಟ್ಟಿಸಲು ಬಿಜೆಪಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‍ನ ಕೆ.ಆರ್.ಪ್ರಭಾಕರ್ ಮಾತನಾಡಿ, 4 ತಿಂಗಳ ಬಳಿಕ ಕರೆದ ಸರ್ವ ಸದಸ್ಯರ ಸಭೆಯನ್ನು ಮುಂದೂಡಿ, ಕೋರಂ ಕೊರತೆ ಕಾರಣಕ್ಕೆ ಎರಡೆರಡು ಬಾರಿ ಸಭೆ ಮುಂದೂಡಲಾಗಿದೆ. ಅಧ್ಯಕ್ಷರ ರಾಜೀನಾಮೆ ವಿಚಾರ, ಆಂತರಿಕ ಕಲಹವಿದ್ದರೆ ಪಕ್ಷದೊಳಗೆ ಇತ್ಯರ್ಥಪಡಿಸಿಕೊಂಡು ಬರಬೇಕು. ಅಧ್ಯಕ್ಷೆ ದಲಿತರಾಗಿದ್ದು, ಅದರಲ್ಲೂ ಮಹಿಳೆಯಾಗಿರುವಾಗ ಈ ರೀತಿ ನಡೆಸಿಕೊಳ್ಳುವುದು ಸೂಕ್ತವಲ್ಲ. ಅವರು ಒಂದಷ್ಟು ಸದಸ್ಯರ ಮನವೊಲಿಸುವ ನಿರೀಕ್ಷೆ ಇತ್ತು. ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.