

ಸದೇಶ್ ಕಾರ್ಮಾಡ್ ಮೈಸೂರು
ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ನಗರದ ಜನರಿಗೆ ನಗರ ಪಾಲಿಕೆಯು ಶುಭ ಸುದ್ದಿಯೊಂದನ್ನು ನೀಡಿದ್ದು, ನೀರಿನ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನಗರ ಪಾಲಿಕೆಯ ನಿರ್ಧಾರ ವರದಾನವಾಗಿದೆ.
ಜೂನ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ದರ ಪರಿಷ್ಕರಣೆಗೆ ಅನುಮೋದನೆ ಪಡೆದು ದರ ಏರಿಕೆ ಮಾಡಬೇಕಾಗಿತ್ತು. ಆದರೆ, ಮೇಯರ್ ಶಿವಕುಮಾರ್ ಸೂಚನೆಯ ಮೇರೆಗೆ ದರ ಪರಿಷ್ಕರಣೆಗೆ ಬ್ರೇಕ್ ಬಿದ್ದಿದೆ. ಇದು ನಗರದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ನಗರ ಪಾಲಿಕೆ ಪ್ರಸಕ್ತ ವರ್ಷದ ಜನವರಿ ತಿಂಗಳಿನಲ್ಲಿಯೇ ದರ ಪರಿಷ್ಕರಣೆಗೆ ಮುಂದಾಗಿತ್ತು. ಆದರೆ, ಮೇಯರ್ ಚುನಾವಣೆ ವಿಳಂಬ ಹಾಗೂ ನಾನಾ ಕಾರಣಗಳಿಂದ ದರ ಪರಿಷ್ಕರಣೆ ವಿಷಯ ಕೌನ್ಸಿಲ್‌ನಲ್ಲಿ ಚರ್ಚೆಗೆ ಬರಲಿಲ್ಲ. ವಿಧಾನಸಭಾ ಚುನಾವಣೆ ಸಂದರ್ಭ ಜನರಿಗೆ ದರ ಏರಿಕೆಯ ಬಿಸಿತಟ್ಟಬಾರದು ಎಂಬ ಕಾರಣಕ್ಕೆ ಮಾಜಿ ಶಾಸಕ ಎಸ್.ಎ. ರಾಮದಾಸ್ ಕೋರಿಕೆಯ ಮೇರೆಗೆ ದರ ಪರಿಷ್ಕರಣೆಯ ಗೋಜಿಗೆ ಪಾಲಿಕೆ ಮುಂದಾಗಿರಲಿಲ್ಲ.
ದರ ಪರಿಷ್ಕರಣೆ ಮುಂದೂಡಲು ಕಾರಣವೇನು?:
ಪಾಲಿಕೆಯು ಜೂ.9 ರಂದು ಹಮ್ಮಿಕೊಂಡಿದ್ದ ಕೌನ್ಸಿಲ್ ಸಭೆಯಲ್ಲಿ ನೀರಿನ ದರ ಪರಿಷ್ಕರಣೆ ವಿಷಯ ಕಾರ್ಯಸೂಚಿಯಲ್ಲಿ ಪ್ರಸ್ತಾಪವಾದರೂ ಮೇಯರ್ ಈ ವಿಷಯವನ್ನು ಚರ್ಚೆಗೆ ತರದೆ ಮುಂದೂಡಿದರು. ನಗರದಲ್ಲಿ ಸಾಕಷ್ಟು ಜನರು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದು ಬಳಸುತ್ತಿದ್ದಾರೆ. ಅದೇ ರೀತಿ ಅಧಿಕೃತವಾಗಿ ನೀರಿನ ಸಂಪರ್ಕ ಪಡೆದರೂ ಸಾಕಷ್ಟು ಜನರು ನೀರಿನ ಶುಲ್ಕ ಪಾವತಿಸುತ್ತಿಲ್ಲ. ಅನಧಿಕೃತವಾಗಿ ಸಂಪರ್ಕ ಪಡೆದವರು ಹಾಗೂ ಶುಲ್ಕ ಪಾವತಿಸದೆ ಇರುವವರ ಸಂಪೂರ್ಣ ಮಾಹಿತಿ ಹಾಗೂ ನಗರಕ್ಕೆ ಎಷ್ಟು ನೀರಿನ ಬೇಡಿಕೆ ಇದೆ? ಎಷ್ಟು ಪೂರೈಕೆಯಾಗುತ್ತಿದೆ ಎಂಬ ಮಾಹಿತಿಯನ್ನು ವಾರ್ಡ್‌ವಾರು ನೀಡುವಂತೆ ಮೇಯರ್ ಶಿವಕುಮಾರ್ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿಗೆ ಸೂಚಿಸಿದ್ದಾರೆ. ನಗರದಲ್ಲಿ ಸಾಕಷ್ಟು ಜನರು ನೀರಿನ ಬಿಲ್ ಪಾವತಿ ಮಾಡುತ್ತಿದ್ದು, ಇನ್ನು ಕೆಲವರು ಪಾವತಿ ಮಾಡುತ್ತಿಲ್ಲ. ಆದರೆ, ಪ್ರಾಮಾಣಿಕವಾಗಿ ನೀರಿನ ಬಿಲ್ ಪಾವತಿಸುವವರ ಮೇಲೆ ಮತ್ತಷ್ಟು ಹೊರೆ ಹೊರಿಸುವುದು ಸರಿಯಲ್ಲ. ಎಲ್ಲರ ಬಳಿಯಲ್ಲೂ ನೀರಿನ ಶುಲ್ಕ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಂತರ ದರ ಪರಿಷ್ಕರಣೆಯ ವಿಷಯವನ್ನು ಕೌನ್ಸಿಲ್‌ಗೆ ತನ್ನಿ ಎಂದು ಮೇಯರ್ ಅಧಿಕಾರಿಗಳಿಗೆ ಕಟ್ಟುನಿ ಟ್ಟಿನ ಸೂಚನೆ ನೀಡಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ನಗರ ಪಾಲಿಕೆ ಚುನಾವಣೆ ಸಹ ಎದುರಾಗಲಿದ್ದು, ಈ ನಡುವೆ ನೀರಿನ ಶುಲ್ಕ ಏರಿಕೆ ಮಾಡಿದರೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ ಪಾಲಿಕೆ ಚುನಾವಣೆ ಮುಕ್ತಾಯಗೊಳ್ಳುವವರೆಗೂ ದರ ಪರಿಷ್ಕರಣೆಯಾಗುವ ಸಾಧ್ಯತೆ ಕಡಿಮೆ.
ನಗರ ಪಾಲಿಕೆ ಕಡೆಯದಾಗಿ 2012ರಲ್ಲಿ ನೀರಿನ ಶುಲ್ಕ ಪರಿಷ್ಕರಣೆ ಮಾಡಿತ್ತು. ಒಂದು ದಶಕದ ಅವಧಿಯಲ್ಲಿ ನೀರಿನ ಶುದ್ಧೀಕರಣದ ವೆಚ್ಚ, ಪೂರೈಕೆಯ ವೆಚ್ಚ, ವಿದ್ಯುತ್ ಬಿಲ್, ಸಿಬ್ಬಂದಿ ವೇತನ, ಇಂಧನ ಬೆಲೆಗಳು ದುಪ್ಪಟ್ಟಾಗಿವೆ. ಸರ್ಕಾರದ ನಿರ್ದೇಶನ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಣೆಯಾಬೇಕಾಗಿದೆ. 2021 ಜನವರಿ ತಿಂಗಳಿನಲ್ಲಿ ನಗರದಲ್ಲಿ ಗೃಹೇತರ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆಯ ನಿರಿನ ಮತ್ತು ಒಳಚರಂಡಿ ಶುಲ್ಕವನ್ನು ಶೇ.20 ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಶೇ.90 ರಷ್ಟು ಸಂಪರ್ಕಗಳು ಗೃಹ ಬಳಕೆಯಲ್ಲಿ ಇರುವುದರಿಂದ ಗೃಹೇತರ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ಶುಲ್ಕ ಹೆಚ್ಚಳದಿಂದ ಪಾಲಿಕೆಗೆ ಪರಿಣಾಮಕಾರಿಯಾಗಿ ನೀರಿನ ಶುಲ್ಕದ ಆದಾಯ ಹೆಚ್ಚಳವಾಗಿಲ್ಲ.
ದರ ಪರಿಷ್ಕರಣೆಯ ವಿವರ:
ಪ್ರಸ್ತುತ ನೀರಿನ ಬಳಕೆಗೆ ನಿಗದಿತ ಶುಲ್ಕ (ಮಿನಿಮಮ್ ಚಾರ್ಜಸ್) 125 ರೂ. ವಿಧಿಸಲಾಗುತ್ತಿದ್ದು, ದರ ಏರಿಕೆಗೆ ಅನುಮೋದನೆ ದೊರೆತರೆ 200 ರೂ.ಗೆ ಏರಿಕೆಯಾಗಲಿದೆ. ಅಲ್ಲದೆ 0-25,000 ಲೀಟರ್ ನೀರಿನ ಬಳಕೆಗೆ 200 ರೂ. ಫ್ಲಾಟ್ ರೇಟ್ ವಿಧಿಸಲಾಗುತ್ತದೆ (ಪ್ರಸ್ತುತ ಈ ಫ್ಲಾಟ್ ರೇಟ್ ಕೇವಲ 5 ರೂ.ಮಾತ್ರ ಇದೆ). 25,000 ಲೀಟರ್ ಮೇಲ್ಪಟ್ಟು ನೀರು ಬಳಕೆ ಮಾಡಿದರೆ ವಿವಿಧ ಸ್ಲಾೃಬ್‌ಗಳಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪವಿದೆ.
25,001 ರಿಂದ 50,000 ಲೀಟರ್‌ವರೆಗೆ ನೀರು ಬಳಕೆ ಮಾಡಿದರೆ ಪ್ರಸ್ತುತ 8 ರೂ.ದರ ವಿಧಿಸಲಾಗುತ್ತಿದ್ದು, ದರ ಪರಿಷ್ಕಣೆಯಾದರೆ 12 ರೂ.ಗೆ ಏರಿಕೆಯಾಗಲಿದೆ. ಅದೇ ರೀತಿ 50,0001 ರಿಂದ 75,000 ಲೀಟರ್ ಬಳಕೆ ದರ ಪ್ರಸ್ತುತ 12 ರೂ. ಇದ್ದು, 17 ರೂ.ಗೆ ಏರಿಕೆ ಮಾಡುವ ಪ್ರಸ್ತಾವನೆ ಇದೆ. 75,001 ರಿಂದ 1,00,000 ಲೀಟರ್ ಬಳಕೆ ದರವನ್ನು 16 ರೂ.ನಿಂದ 22 ರೂ.ಗೆ, 1,00,001 ಲೀಟರ್ ಮೇಲ್ಪಟ್ಟ ನೀರಿನ ಬಳಕೆಯ ದರವನ್ನು 20 ರೂ.ನಿಂದ 27 ರೂ.ಗೆ ಏರಿಸುವ ಪ್ರಸ್ತಾವ ಇದೆ.
ಪರಿಷ್ಕೃತ ದರ ಜಾರಿಯಾದರೆ ಇನ್ನು ಮುಂದೆ ಮಾಸಿಕ 25,000 ಲೀಟರ್ ಒಳಗೆ ನೀರು ಬಳಕೆ ಮಾಡುವ ಗೃಹ ಬಳಕೆಯ ಸಂಪರ್ಕಕ್ಕೆ 80 ರೂ. ಯುಜಿಡಿ ಶುಲ್ಕ ಪಾವತಿಸಬೇಕು. ಒಂದು ವೇಳೆ 25,000 ಲೀಟರ್ ಮೇಲ್ಪಟ್ಟು ನೀರು ಬಳಕೆ ಮಾಡಿದರೆ ನೀರಿನ ಬಳಕೆಯ ಪ್ರಮಾಣದ ಆಧಾರದ ಮೇಲೆ ಶೇ.40 ರಷ್ಟು ಶುಲ್ಕ ವಿಧಿಸಲಾಗುವುದು. ಈ ಯುಜಿಡಿ ಶುಲ್ಕ ನೀರಿನ ಬಿಲ್‌ನೊಂದಿಗೆ ಬರಲಿದೆ.
ನೀರಿನ ಶುಲ್ಕ ಏರಿಕೆಗೂ ಮುನ್ನ ನಗರದಲ್ಲಿ ವಾರ್ಡ್‌ವಾರು ನೀರು ಪೂರೈಕೆಯ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗ ಳಿಗೆ ನಿರ್ದೇಶನ ನೀಡಿದ್ದೇನೆ. ನೀರಿನ ಶುಲ್ಕವನ್ನು ಪ್ರಾಮಾಣಿಕವಾಗಿ ಪಾವತಿಸುವವರ ಮೇಲೆ ಮತ್ತೆ ದರ ಏರಿಕೆಯ ಹೊರೆ ಹೊರಿಸು ವುದು ಸರಿಯಲ್ಲ. ಎಲ್ಲರೂ ನೀರಿನ ಶುಲ್ಕ ಪಾವತಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಅಲ್ಲಿಯವರೆಗೆ ದರ ಪರಿಷ್ಕರಣೆಗೆ ಅವಕಾಶ ನೀಡುವುದಿಲ್ಲ.
ಶಿವಕುಮಾರ್, ಮೇಯರ್