

ಕಾರ್ಗಲ್: ಬೇಸಿಗೆ ಸಮಯದಲ್ಲಿ ಸುಮಾರು 300 ಮಿಲಿಯನ್ ಯೂನಿಟ್‌ನಷ್ಟು ವಿದ್ಯುತ್ ಪ್ರತಿನಿತ್ಯ ಬಳಕೆಗೆ ಬೇಕಿರುವ ಹಿನ್ನೆಲೆಯಲ್ಲಿ ಇದನ್ನು ಸರಿದೂಗಿಸಿಕೊಳ್ಳಲು ಗಾಳಿ ಮತ್ತು ಸೋಲಾರ್‌ಗಳಿಂದ ಹೆಚ್ಚಿನ ವಿದ್ಯುತ್ನ್ ಉತ್ಪಾದನೆ ಮಾಡುವತ್ತ ನಮ್ಮ ಇಂಜಿನಿಯರ್‌ಗಳು ಹೆಚ್ಚು ಗಮನಹರಿಸಬೇಕು ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ನಾರಾಯಣ ಪಿ.ಗಜಕೋಶ್ ಹೇಳಿದರು.
ಜೋಗದ ಶ್ರೀ ಮಹಾಗಣಪತಿ ಸಭಾಭವನದಲ್ಲಿ ಕೆಪಿಸಿ ನಿಮಗದ ಪದವೀಧರ ಮತ್ತು ಡಿಪ್ಲೋಮಾ ಇಂಜಿನಿಯರ್‌ಗಳು ಶುಕ್ರವಾರ ಏರ್ಪಡಿಸಿದ್ದ ಇಂಜಿನಿಯರ್ಸ್ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯ ಕೇವಲ ಶೇ.48 ಭರ್ತಿಯಾಗಿದೆ. ಜಲಾಶಯಕ್ಕೆ ಭರ್ತಿಯಾಗಲು ಶೇ.52 ನೀರಿನ ಕೊರತೆಯುಂಟಾಗಿದೆ. ಮುಂಗಾರು ಮಳೆಯ ಮಾರುತಗಳು ಮುಕ್ತಾಯದ ಹಂತದಲ್ಲಿ ಇರುವುದರಿಂದ ಭರ್ತಿಯಾಗುವುದು ಕಷ್ಟಸಾಧ್ಯ. ಈ ಹಂತದಲ್ಲಿ ಜಲ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಲಿದ್ದು ವಿದ್ಯುತ್‌ಗೆ ಬೇಸಿಗೆ ಸಮಯದಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದರು.
ನಿಗಮದಲ್ಲಿ ಶಾಖೋತ್ಪನ ವಿದ್ಯುತ್ ಉತ್ಪಾದನೆಗೂ ಗುಣಮಟ್ಟದ ಕಲ್ಲಿದ್ದಲು ಸಮಸ್ಯೆ ತಲೆದೋರಿದೆ. ಇದರಿಂದ ಇದನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಸೋಲಾರ್ ಮತ್ತು ಗಾಳಿಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುವತ್ತ ನಿಗಮ ಗಮನ ಹರಿಸಲಿದೆ. ಇದಕ್ಕೆ ನಮ್ಮ ನಿಗಮದ ಇಂಜಿನಿಯರ್‌ಗಳ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್. ಅವರ ಎಲ್ಲ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಶಿವನಸಮುದ್ರದಲ್ಲಿ ಇಂದಿಗೂ ಪ್ರತಿನಿತ್ಯ 45 ಮಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿರುವುದು ಅವರ ದೂರದೃಷ್ಟಿಯ ಫಲ. ಇಂತಹ ಮಹಾನ್ ಸಾಧಕ ಕನ್ನಡಿಗ ಎಂಬುದು ಹೆಮ್ಮೆಯ ವಿಷಯ ಎಂದರು.
ನಿಗಮದ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿವಮೊಗ್ಗ ಜೆಎನ್‌ಎನ್‌ಸಿಇ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ಕಾರ್ತಿಕ್, ಕೆಪಿಸಿ ಸಿವಿಲ್ ವಿಭಾಗದ ಮುಖ್ಯ ಅಭಿಯಂತ ಜಿ.ಸಿ.ಮಹೇಂದ್ರ, ನಿಗಮದ ಅಧೀಕ್ಷಕ ಅಭಿಯಂತ ಕೆ.ಎಂ.ಕೃಷ್ಣಭಟ್, ಆರ್.ಶಿವಕುಮಾರ್, ದಿನೇಶ್, ಟಿ.ಅಶೋಕ್ ನಾಯ್ಕ, ವೈದ್ಯಕೀಯ ಅಧೀಕ್ಷಕಿ ಡಾ. ಎಚ್.ಪ್ರೇಮಲತಾ, ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಕೆ.ವಾಸುದೇವಮೂರ್ತಿ, ಡಿಪ್ಲೋಮಾ ಅಸೋಸಿಯೇಶನ್ ಕಾರ್ಯದರ್ಶಿ ರಾಜೇಶ್ ಇದ್ದರು. ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಅಬೂಬಕರ್ ಸ್ವಾಗತಿಸಿದರು. ಕಾರ್ಯನಿರ್ವಾಹಕ ಅಭಿಯಂತೆ ಅನಿತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಡಳಿತ ವಿಭಾಗದ ಅನಿಲ್ ವಂದನಾರ್ಪಣೆ ಮಾಡಿದರು.