ಹೆಸರಿಗೆ ಸ್ಮಾರ್ಟ್ ಸಿಟಿ , ಗಿಡಗಳಿಗೂ ನೀರಿಲ್ಲ

plant
Published on

ಭರತ್ ಶೆಟ್ಟಿಗಾರ್ ಮಂಗಳೂರು

ಹೆಸರಿಗೆ ಸ್ಮಾರ್ಟ್ ಸಿಟಿ. ಆದರೆ ನಗರವನ್ನು ಸುಂದರೀಕರಣ ಮಾಡಬೇಕಾದ ಪಾಲಿಕೆ ನಗರದಲ್ಲಿ ಕನಿಷ್ಠ ರಸ್ತೆ ಡಿವೈಡರ್‌ಗಳಲ್ಲಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲು ಮುಂದಾಗಿಲ್ಲ. ನಗರದ ಯಾವ ಭಾಗಕ್ಕೂ ಬೇಕಾದರೂ ಹೋಗಿ ಗಿಡಗಳು ನಿರ್ವಹಣೆಯಿಲ್ಲದೆ ಒಣಗಿ ಹೋಗಿರುವುದನ್ನು ನೀವು ಕಾಣಬಹುದು. ಇನ್ನೂ ಕೆಲವು ಕಡೆ ಗಿಡಗಳು ಡಿವೈಡರ್ ತುಂಬೆಲ್ಲ ಹರಡಿ ವಾಹನ ಸವಾರರಿಗೆ ಸಮಸ್ಯೆಯುಂಟುಮಾಡುತ್ತಿವೆ.

ಮಳೆಗಾಲದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ನೆಟ್ಟ ಗಿಡಗಳು ಬೇಸಿಗೆಯಲ್ಲಿ ಒಣಗಿಹೋಗುತ್ತಿವೆ. ಕಳೆದ ಬಾರಿ ನೀರಿಗೆ ಸಮಸ್ಯೆಯಾಗಿ ಹಲವು ಗಿಡಗಳು ಬಿಸಿಲ ಬೇಗೆಗೆ ಒಣಗಿ ಹೋಗಿತ್ತು. ಆದರೆ ಈ ವರ್ಷ ಇಲ್ಲಿಯವರೆಗೆ ನಗರದಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ. ಆದ್ದರಿಂದ ಗಿಡಗಳಿಗೆ ನೀರು ಹಾಕಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಮಾತು.

ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ-ಕುಂಟಿಕಾನ ದೇರೆಬೈಲು ಡಿವೈಡರ್, ಸರ್ಕೀಟ್ ಹೌಸ್‌ನಿಂದ-ಕೆಪಿಟಿ ಮರಕಡ ಡಿವೈಡರ್‌ವರೆಗೆ, ಕ್ಲಾಕ್‌ಟವರ್‌ನಿಂದ-ರಾವ್ ಆ್ಯಂಡ್ ರಾವ್ ಸರ್ಕಲ್ ವೃತ್ತ, ಎ.ಬಿ.ಶೆಟ್ಟಿ ವೃತ್ತದಿಂದ-ಪಾಂಡೇಶ್ವರ, ಲೇಡಿಹಿಲ್ ಸರ್ಕಲ್ ರಸ್ತೆಯಿಂದ-ಉರ್ವ ಮಾರುಕಟ್ಟೆ, ಲೇಡಿಹಿಲ್‌ನಿಂದ ಮಣ್ಣಗುಡ್ಡೆವರೆಗೆ ರಸ್ತೆ ವಿಭಜಕಗಳಲ್ಲಿ ಪಾಲಿಕೆ ವತಿಯಿಂದ ಗಿಡ ನೆಟ್ಟು ಬೆಳೆಸಲಾಗಿದೆ.

ಇವುಗಳ ಪೈಕಿ ಪಾಂಡೇಶ್ವರದ ಫೋರಂ ಮಾಲ್ ಮುಂಭಾಗದಲ್ಲಿ ಡಿವೈಡರ್‌ಗಳಲ್ಲಿ ಗಿಡಗಳು ಸಂಪೂರ್ಣ ಒಣಗಿ ಸತ್ತೇ ಹೋಗಿವೆ. ಸ್ಟೇಟ್‌ಬ್ಯಾಂಕ್ ಹ್ಯಾಮಿಲ್ಟನ್ ಸರ್ಕಲ್‌ನಿಂದ ರಾವ್-ರಾವ್ ವೃತ್ತ ವರೆಗಿನ ರಸ್ತೆ ವಿಭಜಕದಲ್ಲಿ ಅಶ್ವತ್ಥ ಗಿಡ ಬೆಳೆದು ದೊಡ್ಡಗಾಗಿದ್ದು, ಡಿವೈಡರ್ ಅಂತ್ಯದಲ್ಲಿ ಮುಳ್ಳಿನ ಗಿಡದ ಪೊದೆ ಬೆಳೆದಿದೆ. ಡಿವೈಡರ್ ಮಧ್ಯದಲ್ಲಿ ಹಾಕಿರುವ ತಂತಿ ತಡೆಬೇಲಿಯಿಂದಾಗಿ ಸಾಕಷ್ಟು ಗಿಡಗಳು ಸತ್ತು ಹೋಗಿವೆ. ಬೇಲಿಯಲ್ಲಿ ಕಾಣಸಿಗುವ ಬೋಗನ್‌ವಿಲ್ಲಾ(ಪೇಪರ್ ಹೂ) ಗಿಡಗಳನ್ನು ನಗರದ ಹೆಚ್ಚಿನ ಡಿವೈಡರ್‌ಗಳಲ್ಲಿ ನೆಡಲಾಗಿದೆ. ಇವುಗಳಿಗೆ ಹೆಚ್ಚು ನೀರಿನ ಅವಶ್ಯಕತೆಯಿಲ್ಲದಿದ್ದರೂ, ಗಿಡ ಸುತ್ತಲೂ ಹರಡಿ ವಾಹನಗಳ ಸಂಚಾರಕ್ಕೆ ತಡೆಯಾಗುತ್ತಿದೆ. ಇವುಗಳನ್ನು ಕತ್ತರಿಸುವ ಕೆಲಸವೂ ನಡೆದಿಲ್ಲ. ಬಿಜೈ ಕಾಪಿಕಾಡ್ ರಸ್ತೆಯಲ್ಲೂ ಹಲವು ಗಿಡಗಳು ಒಣಗಿದ್ದು, ಇನ್ನಷ್ಟು ಗಿಡಗಳು ಒಣಗುವ ಹಂತಕ್ಕೆ ತಲುಪಿವೆ. ಇದರತ್ತ ಗಮನ ಹರಿಸಲು ಪಾಲಿಕೆ ಅಧಿಕಾರಿಗಳಿಗೆ ಸಮಯ ಇಲ್ಲವಂತೆ.

ಎಲ್ಲಿಗೆ ಹೋಗುತ್ತಿದೆ ಗ್ರೀನ್ ಸೆಸ್?: ಮಂಗಳೂರಿನಲ್ಲಿ ಹಸುರೀಕರಣ ಬಾಯಿ ಮಾತಿಗಷ್ಟೇ ಸೀಮಿತ. ರಸ್ತೆ ಬದಿ ಮತ್ತು ಡಿವೈಡರ್‌ಗಳಲ್ಲಿ ನೆಟ್ಟ ಗಿಡಗಳು ಬಿಸಿಲಿನ ತಾಪಕ್ಕೆ ಒಣಗಿಹೋಗುತ್ತಿವೆ. ಪಾಲಿಕೆಯಲ್ಲಿ ಗ್ರೀನ್ ಸೆಸ್ ಸಂಗ್ರಹ ನಡೆಯುತ್ತಿದೆಯೇ ಹೊರತು ಗಿಡಗಳ ನಿರ್ವಹಣೆ ನಡೆಯುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಮನಪಾ 8 ಕೋಟಿ ರೂಪಾಯಿಗೂ ಅಧಿಕ ಗ್ರೀನ್ ಸೆಸ್ ಸಂಗ್ರಹಿಸಿದೆ. ಆದರೆ ಈ ಹಣವನ್ನು ಹೇಗೆ ವಿನಿಯೋಗಿಸಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ ಎನ್ನುತ್ತಾರೆ ಪರಿಸರ ಹೋರಾಟಗಾರರು.

ಮಳೆಗೆ ಜೀವಕಳೆ: ಸೋಮವಾರ ಮುಂಜಾನೆ ಸುರಿದ ಮಳೆಯಿಂದಾಗಿ ಗಿಡಗಳು ಸ್ವಲ್ಪ ಜೀವ ಕಳೆ ಪಡೆದಿದ್ದು, ಇನ್ನೆರಡು ದಿನ ಸಮಸ್ಯೆಯಾಗದು. ಮತ್ತೆ ಬಿಸಿಲಬ್ಬರ ಹೆಚ್ಚಾದರೆ ಗಿಡಗಳು ಒಣಗಲಿವೆ. ಬೆಳಗ್ಗೆ ನೀರು ಹಾಕುವುದಕ್ಕಿಂತ ಸಾಯಂಕಾಲ ವೇಳೆ ನೀರು ಹಾಕಿದರೆ ಬೆಳಗ್ಗಿನವರೆಗೆ ನೀರಿನ ಅಂಶ ಮಣ್ಣಿನಲ್ಲಿ ಉಳಿಯುವುದರಿಂದ ಗಿಡಗಳಿಗೆ ಹೆಚ್ಚು ಅನುಕೂಲ. ಬೆಳಗ್ಗೆ ನೀರು ಹಾಕಿದರೆ ಬಿಸಿಲಿನ ಒಂದು ಗಂಟೆಯಲ್ಲೇ ನೀರೆಲ್ಲ ಆವಿಯಾಗಿ ನೆಲ ಒಣಗಿ ಹೋಗುತ್ತದೆ.

ಸ್ಥಳೀಯರಿಂದ ಪೋಷಣೆ: ಮಣ್ಣಗುಡ್ಡೆ ಗುರ್ಜಿ ಬಳಿಯ ಡಿವೈಡರ್‌ನಲ್ಲಿರುವ ಗಿಡಗಳು ಹಚ್ಚಹಸುರಿನಿಂದ ಕಂಗೊಳಿಸುತ್ತವೆ. ನಗರದ ಇತರ ಕಡೆಗಳ ಗಿಡಗಳಿಗೂ ಇಲ್ಲಿನ ಡಿವೈಡರ್‌ನಲ್ಲಿರುವ ಗಿಡಗಳಿಗೂ ತುಂಬಾ ವ್ಯತ್ಯಾಸವಿದೆ. ಸ್ಥಳೀಯರು ಇಲ್ಲಿನ ಗಿಡಗಳನ್ನು ಪೋಷಿಸುತ್ತಿರುವುದೇ ಇದಕ್ಕೆ ಕಾರಣ. ಇಲ್ಲಿ ಒಂದೇ ಜಾತಿಯ ಗಿಡಗಳಿರದೆ ಹಲವು ವಿಧವಿಧದ ಹೂವಿನ ಗಿಡಗಳು, ಪಪ್ಪಾಯಿಯಂತಹ ಗಿಡಗಳೂ ಇವೆ. ನೀರಿನ ಜತೆ, ಸ್ಥಳೀಯರು ಗೊಬ್ಬರವನ್ನೂ ಹಾಕುತ್ತಿರುವುದು ವಿಶೇಷ.

ಡಿವೈಡರ್‌ಗಳಲ್ಲಿರುವ ಗಿಡಗಳಿಗೆ ಪಾಲಿಕೆ ವತಿಯಿಂದಲೇ ನೀರು ಹಾಕುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈ ಕುರಿತು ಮತ್ತೊಮ್ಮೆ ಪರಿಶೀಲಿಸುತ್ತೇನೆ. ದಿವಾಕರ್ ಪಾಂಡೇಶ್ವರ, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net