ಚೀನಾ ವಿರುದ್ಧ ಯುದ್ಧ ಬೇಡ; ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಮತ

16-KND-PHOTO-1A
Published on

ಕುಂದಾಣ: ದೇಶವನ್ನು ಕರೊನಾ ಮಹಾಮಾರಿ ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಚೀನಾ ಗಡಿ ಕ್ಯಾತೆ ತೆಗೆದು ದೇಶದ ಇಪ್ಪತ್ತಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣವಾಗಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಗ್ರಾಪಂ ಎರಡನೇ ಮಹಡಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವ ಸಂದರ್ಭದಲ್ಲಿ ಚೀನಾ ವಿರುದ್ಧ ಯುದ್ಧ ಬೇಕಾಗಿಲ್ಲ. ಗಡಿ ವಿಚಾರ ಏನೇ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರಿಗೆ ಮನವಿ ಮಾಡುತ್ತೇನೆ ಎಂದರು.

ಕನ್ನಡಿಗ ಎಚ್.ಡಿ.ದೇವೇಗೌಡ ಅವರು 1996ರಲ್ಲಿ ಪ್ರಧಾನಮಂತ್ರಿಯಾಗಿದ್ದಾಗ ಚೀನಾ ಗಡಿ ವಿಷಯಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಅಧ್ಯಕ್ಷರನ್ನು ಕರೆಸಿ ಹಲವು ಒಪ್ಪಂದಗಳ ಮೂಲಕ ಸೌಹಾರ್ದ ಕಾಪಾಡಿಕೊಂಡಿದ್ದರು ಎಂದರು.

ನಾನು ಇಪ್ಪತ್ತು ತಿಂಗಳು ಮತ್ತು ಹದಿನಾಲ್ಕು ತಿಂಗಳು ಎರಡು ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಹಲವಾರು ಜನಪರ ಮತ್ತು ರೈತಪರ ಕಾರ್ಯಕ್ರಮ ಕೊಟ್ಟಿದ್ದೇನೆ. ನಮಗೆ ಐದು ವರ್ಷ ಪೂರ್ಣಾವಧಿ ಅಧಿಕಾರ ಕೊಟ್ಟಿದ್ದರೆ ರೈತರ ಮಕ್ಕಳು ಏನು ಮಾಡಬಹುದು ಎಂಬುದನ್ನು ತೋರಿಸುತ್ತಿದ್ದೆ ಎಂದರು.

ಕಾರಹಳ್ಳಿ ಗ್ರಾಪಂ ಕಟ್ಟಡ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾಪಂ ಅಭಿವೃದ್ಧಿ ಹೊಂದಿದರೆ ಮಾತ್ರ ಮೂಲಸೌಕರ್ಯ ಕೊಡಲು ಸಾಧ್ಯ. ಶಾಸಕರು ಅಹಂ ಇಲ್ಲದೆ ಎಲ್ಲರೊಂದಿಗೆ ಬೆರೆತು ಬಾಳುವ ವ್ಯಕ್ತಿಯಾಗಿದ್ದು, ಇದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಜೆಡಿಎಸ್ ಪಾಳ್ಯ ಜಿಲ್ಲಾಧ್ಯಕ್ಷ ಮುನೇಗೌಡ, ತಾಲೂಕು ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ, ತಾಪಂ ಸದಸ್ಯ ಮಹೇಶ್, ಕಾರಹಳ್ಳಿ ಶ್ರೀನಿವಾಸ್, ವಿಎಸ್ಸೆಸ್ಸೆನ್ ಅಧ್ಯಕ್ಷ ಆರ್.ಮಂಜುನಾಥ್, ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಕಾರಹಳ್ಳಿ ಮುನೇಗೌಡ, ಮಾಜಿ ಅಧ್ಯಕ್ಷ ರಾಜೇಂದ್ರ, ಸದಸ್ಯ ನರಸಿಂಹಮೂರ್ತಿ, ಪಿಡಿಒ ಕವಿತಾ ಮತ್ತಿತರರಿದ್ದರು.

ಮಾಧ್ಯಮಗಳಿಗೆ ಎಚ್‌ಡಿಕೆ ಸಲಹೆ: ಮಾಧ್ಯಮಗಳ ವಿರುದ್ಧ ಅಸಮಾಧಾನ ಮುಂದುವರಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಮ್ಮ ಸರ್ಕಾರದ ಅವಧಿಯಲ್ಲಿ 24 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಇದಕ್ಕೆ ಹೆಚ್ಚಿನ ಪ್ರಚಾರ ಸಿಗಲಿಲ್ಲ.

ಮಾಧ್ಯಮದವರು ಸರ್ಕಾರದ ಪರವಾಗಿ ಸುದ್ದಿ ಮಾಡುವುದನ್ನು ಬಿಟ್ಟು, ದೇಶದ ಪರವಾಗಿ ಸುದ್ದಿಮಾಡಿ. ಜನರಲ್ಲಿ ಇಲ್ಲದ ಗೊಂದಲ ಸೃಷ್ಟಿಸದೆ ಜನಪರವಾಗಿ ಯಾರಾದರೂ ಕೆಲಸ ಮಾಡಿದರೆ ಅವರ ಬಗ್ಗೆ ಒಂದಿಷ್ಟು ಕಾಳಜಿ ತೋರಿಸಿ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net