

ಪಿ.ಬಿ.ಹರೀಶ್ ರೈ ಮಂಗಳೂರು
ಕೊಲದ ಪಶುವೈದ್ಯಕೀಯ ಕಾಲೇಜಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿ ಮೂರುವರೆ ವರ್ಷ ಕಳೆದಿವೆ. ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗುವುದು ಎಂದು ಆಗ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಅನುದಾನ ಬಿಡುಗಡೆಗೆ ವಿಳಂಬವಾದ ಕಾರಣ ಕಾಲೇಜಿನ ಕಟ್ಟಡ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೂ ಕಾಲೇಜು ಆರಂಭವಾಗುವುದಿಲ್ಲ.
2012-13ನೇ ಸಾಲಿನ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪುತ್ತೂರಿನ ಕೊಲದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ(ಕೊಲ ಫಾರ್ಮ್)ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಕೊಲ ಫಾರ್ಮ್‌ನ ಸುಪರ್ದಿಯಲ್ಲಿದ್ದ 247 ಎಕರೆ ಜಮೀನನ್ನು ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರಿಗೆ ವರ್ಗಾಯಿಸಲಾಗಿತ್ತು.
ವಿಳಂಬ ನೀತಿ: ಜಾಗ ಹಸ್ತಾಂತರವಾದ ಕೂಡಲೇ ಕಾಮಗಾರಿ ಶುರುವಾಗಲಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಸರ್ಕಾರ ಬದಲಾಯಿತು. ಆದರೆ ಯಾವುದೇ ಕಾಮಗಾರಿ ಆರಂಭವಾಗದೆ ಎರಡು ವರ್ಷದಿಂದ ಜಾಗ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಈ ಮಧ್ಯೆ ರಾಜಕೀಯ ಪ್ರಭಾವ ಬಳಸಿ ಯೋಜನೆಯನ್ನು ತುಮಕೂರಿಗೆ ವರ್ಗಾಯಿಸುವ ಪ್ರಯತ್ನವೂ ನಡೆದಿತ್ತು. ಕೊನೆಗೂ 2016ರ ಅಕ್ಟೋಬರ್ 9ರಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲದ ಪಶುವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು.
65 ಕೋಟಿ ರೂ.ಬಿಡುಗಡೆ: ಹೌಸಿಂಗ್ ಬೋರ್ಡ್‌ನಿಂದ ಆಸ್ಪತ್ರೆ ಕಟ್ಟಡ, ಕಾಲೇಜು ಕಟ್ಟಡ ಸಹಿತ ಒಟ್ಟು 5 ಕಟ್ಟಡಗಳ ಕಾಮಗಾರಿ ಆರಂಭವಾಗಿತ್ತು. ಮತ್ತೆ ಸರ್ಕಾರ ಬದಲಾಯಿತು. ಅನುದಾನ ಮಂಜೂರಾಗಿದ್ದರೂ, ಸರ್ಕಾರದಿಂದ ಸಕಾಲದಲ್ಲಿ ಹಣ ಬಿಡುಗಡೆಯಾಗದ ಕಾರಣ ಕಟ್ಟಡ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಯೋಜನೆಗೆ ಸರ್ಕಾರ 110 ಕೋಟಿ ರೂ. ಮಂಜೂರು ಮಾಡಿದೆ.
ಬಿಡುಗಡೆಯಾಗದ ಹಣ: 80 ಕೋಟಿ ರೂ.ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದುವರೆಗೆ 65 ಕೋಟಿ ರೂ.ಬಿಡುಗಡೆಯಾಗಿದೆ. ಇದರಿಂದ ಕಟ್ಟಡದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಸಕಾಲದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ 2018-19ನೇ ಸಾಲಿನಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕಿತ್ತು. ಆದರೆ, 2020-21ರ ಶೈಕ್ಷಣಿಕ ವರ್ಷಕ್ಕೂ ಕಟ್ಟಡ ರೆಡಿಯಾಗಿಲ್ಲ.
ಪುತ್ತೂರು ಪಶುವೈದ್ಯಕೀಯ ಕಾಲೇಜಿಗೆ 110 ಕೋಟಿ ರೂ.ಮಂಜೂರಾಗಿ, 65 ಕೋಟಿ ರೂ. ಬಿಡುಗಡೆಯಾಗಿದೆ. ಆಸ್ಪತ್ರೆ ಕಟ್ಟಡ, ಕಾಲೇಜು ಕಟ್ಟಡ, ಹುಡುಗರ ಹಾಗೂ ಹುಡುಗಿಯರ ಹಾಸ್ಟೆಲ್, ಗೆಸ್ಟ್ ಹೌಸ್ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ತಿ ಹಣ ಬಿಡುಗಡೆಯಾಗದಿದ್ದರೂ ಕಾಮಗಾರಿ ನಿರಂತರ ನಡೆಯುತ್ತಿದೆ. ನಾರಾಯಣ ಭಟ್ ವಿಶೇಷ ಕರ್ತವ್ಯ ಅಧಿಕಾರಿ, ಪುತ್ತೂರು ಪಶು ವೈದ್ಯಕೀಯ ಕಾಲೇಜು