ಮಧ್ಯರಾತ್ರಿ ವಾಹನ ಸಂಚಾರಕ್ಕೆ ನಿಬರ್ಂಧ

25 skp 2--
Published on


ಸಕಲೇಶಪುರ : ಮಳೆ ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಸತತ 12 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು.


ಕಾಮಗಾರಿ ಆರಂಭವಾದ ವೇಳೆ ಭಾರಿ ಪ್ರಮಾಣಲ್ಲಿ ಮಳೆ ಸುರಿದ ಪರಿಣಾಮ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ಆದರೆ ಕಾಮಗಾರಿ ಆರಂಭವಾದ ವೇಳೆ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಹೊಂಡಗಳು ನಿರ್ಮಾಣವಾಗಿದ್ದವು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.


ಈಗ ತಾಲೂಕಿನ ಆನೆಮಹಲ್ ಗ್ರಾಮ ಸಮೀಪ ಬಾಕಿ ಉಳಿದಿರುವ ಚತುಷ್ಪಥ ಕಾಮಗಾರಿಯನ್ನು ಮಂಗಳವಾರ ರಾತ್ರಿಯಿಂದ ಕಾಮಗಾರಿ ಆರಂಭಿಸಲಾಗಿದೆ. ಮಧ್ಯರಾತ್ರಿ ವಾಹನ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಡಕಾಯಿತು. ಬೆಂಗಳೂರು-ಮಂಗಳೂರು ನಡುವೆ ವಾಹನಗಳು ಕಿ.ಮೀ.ಗಟ್ಟಲೆ ಸಾಲಿನಲ್ಲಿ ನಿಲುಗಡೆಯಾಗಿತ್ತು.


ವಾಹನಗಳಲ್ಲಿ ಇದ್ದ ಮಹಿಳೆಯರು, ಮಕ್ಕಳು, ಆಹಾರ, ಶೌಚಕ್ಕೂ ತೊಂದರೆ ಅನುಭವಿಸಿದರು. ಬುಧವಾರ ಬೆಳಗ್ಗೆಯೂ ಸಹ ವಾಹನ ಸಂಚಾರವನ್ನು ಮುಕ್ತಗೊಳಿಸದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ಪರೀಕ್ಷೆಗೆಂದು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.


ಸಮಸ್ಯೆ ಬಗೆಹರಿಸಿದ ಶಾಸಕ:
ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವುದನ್ನು ಗಮನಿಸಿದ ಶಾಸಕ ಸಿಮೆಂಟ್ ಮಂಜು, ಕಾಮಗಾರಿಯಿಂದ ಕೆಸರು ಮಯವಾಗಿದ್ದ ರಸ್ತೆಗೆ ಬುಧವಾರ ಮುಂಜಾನೆ ಜಲ್ಲಿ ತರಿಸಿ ರಸ್ತೆಗೆ ಹಾಕಿಸುವ ಮೂಲಕ ಏಕಮುಖ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಇದರಿಂದಾಗಿ ಸಂಜೆ ವೇಳೆಗೆ ಬಹುತೇಕ ಟ್ರಾಫಿಕ್ ಸಮಸ್ಯೆ ಹತೋಟಿಗೆ ಬಂತು.


ಸಿಮೆಂಟ್ ಮಂಜು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ-75ರಲ್ಲಿ 8 ವರ್ಷಗಳಿಂದ ನಿರಂತರವಾಗಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಆದರೂ ಸಹ ಹಾಸನದಿಂದ ಮಾರನಹಳ್ಳಿವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಂಗಳವಾರ ಸುರಿಯುವ ಮಳೆ ನಡುವೆ ಮುಂದಲೋಚನೆ ಇಲ್ಲದೆ ಕಾಮಗಾರಿ ಆರಂಭಿಸಿದ್ದಾರೆ. ಇದು ಅವ್ಯವಸ್ಥೆ ಸೃಷ್ಟಿಗೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net