ಕಬ್ಬನ್ ಉದ್ಯಾನವನದಲ್ಲಿ ವಾಹನಸಂಚಾರಕ್ಕೆ ಬ್ರೇಕ್; ತೋಟಗಾರಿಕೆ ಸಚಿವ ಸೋಮಣ್ಣ

CUBBON
Published on

ಬೆಂಗಳೂರು:  ಉದ್ಯಾನನಗರಿಯ ಪ್ರಮುಖ ತಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್​ನ ರಕ್ಷಣೆ ಹಾಗೂ ಶುದ್ಧ ಗಾಳಿ ಉಳಿಸಿಕೊಳ್ಳಲೆಂದು ಪಾರ್ಕ್​ನೊಳಗೆ ಹಂತಹಂತವಾಗಿ ವಾಹನಗಳ ಸಂಚಾರ ಕಡಿತ ಮಾಡಬೇಕೆಂಬ ಚಿಂತನೆ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ ಎಂದು ತೋಟಗಾರಿಕೆ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಕಬ್ಬನ್ ಪಾರ್ಕ್ ನಿರ್ವಹಣೆ ಅರಿಯಲು ಬುಧವಾರ ಬೆಳಗ್ಗೆ ವಾಯುವಿಹಾರ ಮಾಡಿ ಸಾರ್ವಜನಿಕರೊಂದಿಗೆ ವಿಚಾರ ವಿನಿಮಯ ನಂತರ ಮಾತನಾಡಿದರು. ಸದ್ಯಕ್ಕೆ ಪಾರ್ಕ್ ಒಳಗೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಆದರೆ ಬೆಳೆಯುತ್ತಿರುವ ನಗರ, ವಾಹನದಟ್ಟಣೆಯಿಂದ ಶುದ್ಧ ಗಾಳಿ ಸಿಗುತ್ತಿಲ್ಲವೆಂಬ ನಾಗರಿಕರ ತೊಳಲಾಟ ಗಮನಿಸಿಯೇ ಅಧಿಕಾರಿಗಳು ವಾಹನಸಂಚಾರ ನಿಷೇಧದ ಬಗ್ಗೆ ಯೋಚಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ರ್ಚಚಿಸುವೆ ಎಂದರು.

ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್ ಮತ್ತು ಸಚಿವಾಲಯಗಳು ನಗರದ ಹೃದಯಭಾಗದಲ್ಲಿ ಇರುವ ಕಾರಣ ಪಾರ್ಕ್​ನೊಳಗೆ ವಾಹನಗಳ ಸಂಚಾರ ಕ್ರಮೇಣ ಕಡಿತ ಸಾಧುವೇ- ಸಾಧ್ಯವೇ ಎಂಬುದು ಗಂಭೀರವಾಗಿ ಆಲೋಚಿಸಬೇಕಾದ ವಿಷಯ ಎಂದರು. ತೋಟಗಾರಿಕೆ ಇಲಾಖೆ ನಿರ್ದೇಶಕಿ ಕುಸುಮಾ, ಹಿರಿಯ, ಕಿರಿಯ ಅಧಿಕಾರಿಗಳು ಇದ್ದರು.

ಸುಧಾರಣೆಗೆ ಹೆಚ್ಚಿನ ಒತ್ತು

ಕಬ್ಬನ್ ಪಾರ್ಕ್​ನಲ್ಲಿ ಸೈಕ್ಲಿಂಗ್ ಟ್ರಾ್ಯಕ್ ನಿರ್ವಿುಸಲಾಗುತ್ತಿದೆ. ಲಾಫಿಂಗ್ ಲಾಂಜ್, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ನಡಿಗೆ ಟ್ರಾ್ಯಕ್, ವ್ಯಾಯಾಮಕ್ಕೆ ವ್ಯವಸ್ಥೆ, ಫುಟ್​ಪಾತ್ ಮತ್ತು ಕಾರಂಜಿ ಅಭಿವೃದ್ಧಿ, ಲಭ್ಯ ತಾಂತ್ರಿಕ ವ್ಯವಸ್ಥೆ ಬಳಸಿಕೊಂಡು ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು. ಕಟ್ಟುನಿಟ್ಟಿನ ನಿಗಾ ಇಡಲು 100ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, 300 ಜನ ಕಾವಲು ಸಿಬ್ಬಂದಿಯಿದ್ದಾರೆ. ಪಾರ್ಕ್​ಗೆ ಬಂದವರಲ್ಲಿ ನನ್ನ ಮನೆ ಎಂಬ ಭಾವನೆ ಮೂಡಬೇಕು. ಆರಾಮವಾಗಿ ಒಂದೆರಡು ತಾಸು ಕಾಲ ಕಳೆದು ಹೋಗುವಂತಿರಬೇಕು. ಸ್ವಚ್ಛತೆಗೂ ಆದ್ಯತೆ ನೀಡಿದ್ದು, ನಾಗರಿಕರ ಸಹಕಾರವೂ ಅಷ್ಟೇ ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net